ತಮಿಳುನಾಡು ಬಿಎಸ್ಪಿ ಮುಖ್ಯಸ್ಥನ ಹತ್ಯೆ ಪ್ರಕರಣ: ಬಿಜೆಪಿಯ ಮಾಜಿ ಪದಾಧಿಕಾರಿಯ ಬಂಧನ
PC : timesofindia.indiatimes.com
ಚೆನ್ನೈ: ಜುಲೈ 5ರಂದು ನಡೆದಿದ್ದ ತಮಿಳುನಾಡು ಬಿಎಸ್ಪಿ ಮುಖ್ಯಸ್ಥ ಕೆ.ಆರ್ಮ್ಸ್ಟ್ರಾಂಗ್ ಹತ್ಯೆಯ ಸಂಬಂಧ ಬಿಜೆಪಿಯ ಮಾಜಿ ಪದಾಧಿಕಾರಿಯಾದ ಅಂಜಲಾಳ್ (48) ಎಂಬ ಮಹಿಳೆಯನ್ನು ಶುಕ್ರವಾರ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಚೆನ್ನೈನಲ್ಲಿ ಬಿಜೆಪಿಯ ಜಿಲ್ಲಾ ಪದಾಧಿಕಾರಿಯಾಗಿದ್ದ ಅಂಜಲಾಳ್ರನ್ನು ವಿಶೇಷ ತನಿಖಾ ತಂಡವು ಬಂಧಿಸಿದೆ.
ಆರ್ಮ್ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಅಂಜಲಾಳ್ ವಿರುದ್ಧ ಪ್ರಕರಣ ದಾಖಲಾದ ನಂತರ, ಬಿಜೆಪಿಯು ಆಕೆಯನ್ನು ಪಕ್ಷದ ಹುದ್ದೆಯಿಂದ ತೆಗೆದು ಹಾಕಿತ್ತು.
ಮತ್ತೊಂದು ಪ್ರಕರಣದಲ್ಲಿ ಈಗ ವೆಲ್ಲೂರು ಕೇಂದ್ರೀಯ ಬಂದೀಖಾನೆಯಲ್ಲಿರುವ ರೌಡಿಯೊಬ್ಬನಿಂದ ಅಂಜಲಾಳ್ ನಗದು ಸ್ವೀಕರಿಸಿದ್ದರು ಎನ್ನಲಾಗಿದೆ. "ಈ ಕುರಿತು ಅಂಜಲಾಳ್ರನ್ನು ವಿಚಾರಣೆಗೊಳಪಡಿಸಿ, ಈ ಸಂಗತಿಯನ್ನು ದೃಢಪಡಿಸಿಕೊಳ್ಳುತ್ತೇವೆ" ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಲ್ಲದೆ, ಆರ್ಮ್ಸ್ಟ್ರಾಂಗ್ ಹತ್ಯೆಗೂ ಮುನ್ನ, ಅಂಜಲಾಳ್ ಹಂತಕರಿಗೆ ಆಶ್ರಯ ನೀಡಿದ್ದಳು ಎಂದೂ ಅವರು ಹೇಳಿದ್ದಾರೆ.
ಆರ್ಮ್ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 15 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತ ಶಂಕಿತ ಆರೋಪಿಗಳ ಪೈಕಿ ಕುಂದ್ರತ್ತೂರ್ ನಿವಾಸಿಯಾದ ಕೆ.ತಿರುವೆಂಗಡಂ (33) ಎಂಬ ವ್ಯಕ್ತಿಯನ್ನು ಕಳೆದ ರವಿವಾರ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದರು.