ಶಿಕ್ಷಣವನ್ನು ರಾಜ್ಯಪಟ್ಟಿಗೆ ವರ್ಗಾಯಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಆಗ್ರಹ
ಎಂ.ಕೆ. ಸ್ಟಾಲಿನ್ | Photo : PTI
ಚೆನ್ನೈ: ಶಿಕ್ಷಣದಂತಹ ಜನರಿಗೆ ನೇರವಾಗಿ ಸಂಬಂಧಿಸಿದ ವಿಷಯಗಳನ್ನು ರಾಜ್ಯ ಪಟ್ಟಿಗೆ ವರ್ಗಾಯಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಆಗ್ರಹಿಸಿದ್ದಾರೆ.
‘‘ಶಿಕ್ಷಣವನ್ನು ಸಂವಿಧಾನದ ರಾಜ್ಯ ಪಟ್ಟಿಗೆ ವರ್ಗಾಯಿಸಿದರೆ ಮಾತ್ರ, ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಥವಾ ನೀಟ್ನಂತಹ ಅರ್ಹತಾ ಪರೀಕ್ಷಾ ಮಾದರಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬಹುದು’’ ಎಂದು ಅವರು ಸ್ವಾತಂತ್ರೋತ್ಸವದ ಭಾಷಣದಲ್ಲಿ ಹೇಳಿದರು.
ತಮಿಳುನಾಡಿನಲ್ಲಿ ಹಲವು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾದ ಬಳಿಕ ತಮಿಳುನಾಡು ವಿಧಾನ ಸಭೆ ಕೇಂದ್ರೀಕೃತ ವೈದ್ಯಕೀಯ ಪರೀಕ್ಷೆಯ ವ್ಯಾಪ್ತಿಯಿಂದ ರಾಜ್ಯಕ್ಕೆ ವಿನಾಯತಿ ಕೋರುವ ವಿಧೇಯಕವನ್ನು 2022 ಸೆಪ್ಟಂಬರ್ನಲ್ಲಿ ಅಂಗೀಕರಿಸಿತ್ತು. ಆದರೆ, ರಾಜ್ಯಪಾಲ ಆರ್.ಎನ್. ರವಿ ಅವರು ಈ ವಿಧೇಯಕಕ್ಕೆ ಅನುಮತಿ ನೀಡಿರಲಿಲ್ಲ. ಅನಂತರ ತಮಿಳುನಾಡು ವಿಧಾನ ಸಭೆ 2022 ಫೆಬ್ರವರಿಯಲ್ಲಿ ಈ ವಿಧೇಯಕವನ್ನು ಮತ್ತೊಮ್ಮೆ ಅಂಗೀಕರಿಸಿತು ಹಾಗೂ ಅನುಮತಿಗೆ ರಾಷ್ಟ್ರಪತಿ ಮುರ್ಮು ಅವರಿಗೆ ಕಳುಹಿಸಿತು.