ಹಿಂದಿ ವಸಾಹತುಶಾಹಿಯನ್ನು ಸಹಿಸಲಾರೆವು: ತಮಿಳುನಾಡು ಸಿಎಂ ಸ್ಟಾಲಿನ್

ಎಂ.ಕೆ. ಸ್ಟಾಲಿನ್ | PC : PTI
ಚೆನ್ನೈ: ಬ್ರಿಟೀಷ್ ವಸಾಹತುಶಾಹಿ ಬದಲು ಹಿಂದಿ ವಸಾಹತುಶಾಹಿಯನ್ನು ತಮಿಳುನಾಡು ಜನರು ಸಹಿಸಲಾರರು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಪಾದಿಸಿದ್ದಾರೆ. ತ್ರಿಭಾಷಾ ನೀತಿಯ ಪರವಾಗಿ ಬಿಜೆಪಿಯ ಸಹಿ ಅಭಿಯಾನದ ಕುರಿತು ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಮಾಧ್ಯಮದ ವೇದಿಕೆ ‘ಎಕ್ಸ್’ನ ಪೋಸ್ಟ್ನಲ್ಲಿ ಸ್ಟಾಲಿನ್, ರಾಜ್ಯದಲ್ಲಿ ಇತ್ತೀಚೆಗೆ ಸರಣಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ್ದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್. ಅವರು ತನ್ನ ಸ್ಥಾನವನ್ನು ಮರೆತಿದ್ದಾರೆ. ಅಲ್ಲದೆ, ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳಲು ಇಡೀ ರಾಜ್ಯದಲ್ಲಿ ಬೆದರಿಕೆ ಒಡ್ಡುವ ಧೈರ್ಯವನ್ನು ತೋರಿಸಿದ್ದಾರೆ ಎಂದಿದ್ದಾರೆ.
ಕೇಂದ್ರವು ಎನ್ಇಪಿ ಮೂಲಕ 2030ರ ಒಳಗೆ ಸಾಧಿಸಲು ಉದ್ದೇಶಿಸಿರುವ ವಿವಿಧ ಗುರಿಗಳನ್ನು ರಾಜ್ಯವು ಈಗಾಗಲೇ ಸಾಧಿಸಿದೆ. ಇದು ಪಿಎಚ್ಡಿ ಪದವಿ ಪಡೆದವರಿಗೆ ಎಲ್ಕೆಜಿ ವಿದ್ಯಾರ್ಥಿ ಬೋಧಿಸಿದಂತಿದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡು ದಿಲ್ಲಿಯಿಂದ ಉಕ್ತಲೇಖನಗಳನ್ನು ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಬದಲಾಗಿ, ಅದು ರಾಷ್ಟ್ರ ಅನುಸರಿಸಬೇಕಾದ ನಿಯಮವನ್ನು ನಿಗದಿಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಹಿಂದಿ ಹೇರಿದವರನ್ನು ಇಲ್ಲಿನ ಜನರು ತಿರಸ್ಕರಿಸಿದ್ದಾರೆ. ಹಿಂದಿಯನ್ನು ವಾಕರಿಕೆ ಬರುವಷ್ಟು ಹೇರಲಾಗಿದೆ. ಇದರಿಂದ ದೇಶದಲ್ಲಿರುವ ಬಹುಸಂಖ್ಯಾತ ಹಿಂದಿಯೇತರ ಭಾಷಿಕರು ಉಸಿರುಗಟ್ಟುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಎನ್ಇಪಿ ಪರವಾಗಿ ಬಿಜೆಪಿ ನಡೆಸುತ್ತಿರುವ ಸಹಿ ಅಭಿಯಾನದ ಬಗ್ಗೆ ವ್ಯಂಗ್ಯವಾಡಿರುವ ಸ್ಟಾಲಿನ್, ಇದು ತಮಿಳುನಾಡಿನಲ್ಲಿ ನಗೆಪಾಟಲಿಗೆ ಈಡಾಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಹಿ ಅಭಿಯಾನಕ್ಕೆ ವ್ಯಕ್ತವಾಗುತ್ತಿರುವ ಬೆಂಬಲ ನೋಡಿ ಸ್ಟಾಲಿನ್ ಗಾಬರಿಗೊಂಡಿದ್ದಾರೆ ಎಂದು ಹೇಳಿದ್ದಾರೆ.