ಪ್ರಧಾನಿ ಮೋದಿಯ ಕೋಮುವಾದಿ ಹೇಳಿಕೆಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಕಾಂಗ್ರೆಸ್
Photo: PTI
ಚೆನ್ನೈ: ಲೋಕಸಭಾ ಚುನಾವಣಾ ಪ್ರಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋಮುವಾದಿ ಹೇಳಿಕೆಗಳನ್ನು ನೀಡುತ್ತಿದ್ದು, ಈ ಬಗ್ಗೆ ನ್ಯಾಯಾಂಗವು ಮಧ್ಯಪ್ರವೇಶಿಸಬೇಕೆಂದು ಕೋರಿ ತಮಿಳುನಾಡು ಕಾಂಗ್ರೆಸ್ ಘಟಕವು ಬುಧವಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಮೋದಿಯ ಭಾಷಣಗಳು ಕೇವಲ ಪ್ರಚೋದನಾಕಾರಿಯಾಗಿಲ್ಲ, ಬದಲಿಗೆ ನಿಂದನಾತ್ಮಕವಾಗಿದ್ದು, ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯ ಹಾಗೂ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡಿವೆ ಎಂದು ಟಿಎನ್ಸಿಸಿ ಅಧ್ಯಕ್ಷ ಕೆ.ಸೆಲ್ವಪೆರುಂಥಗೈ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪ್ರಧಾನಿ ಮೋದಿಯ ದ್ವೇಷ ಭಾಷಣಗಳ ವಿರುದ್ಧ ಭಾರತೀಯ ಚುನಾವಣಾ ಆಯೋಗಕ್ಕೆ ಹಲವಾರು ದೂರುಗಳನ್ನು ನೀಡಿದರೂ, ಚುನಾವಣಾ ಆಯೋಗವು ನರೇಂದ್ರ ಮೋದಿಗೆ ನೇರವಾಗಿ ಶೋಕಾಸ್ ನೋಟಿಸ್ ನೀಡುವ ಬದಲು ಭಾರತೀಯ ಜನತಾ ಪಕ್ಷಕ್ಕೆ ಕೇವಲ ಒಂದು ಶೋಕಾಸ್ ನೋಟಿಸ್ ಅನ್ನು ಜಾರಿಗೊಳಿಸಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ ಎಂದು Bar and Bench ಸುದ್ದಿ ಸಂಸ್ಥೆ ವರದಿ ಮಾಡಿದೆ.
ದ್ವೇಷ ಭಾಷಣಗಳ ಏಕೈಕ ಅಪರಾಧಿ ಪ್ರಧಾನಿ ಮೋದಿಯೇ ಆಗಿದ್ದಾರೆ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.
“ಈ ಪ್ರಚೋದನಕಾರಿ, ನಿಂದನಾತ್ಮಕ ಹಾಗೂ ವಿಭಜನಾತ್ಮಕ ಭಾಷಣಗಳಿಗೆ ಮೋದಿಯೊಬ್ಬರೇ ಖುದ್ದು ಜವಾಬ್ದಾರರಾಗಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಮೃದು ಧೋರಣೆಯು ಜನರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಹಾಗೂ ನಮ್ಮ ದೇಶದ ಒಟ್ಟಾರೆ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಹೂತು ಹಾಕುತ್ತದೆ” ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಈ ಪ್ರಕರಣವು ನ್ಯಾ. ಎ.ಡಿ.ಜಗದೀಶ್ ಚಂದಿರ ಹಾಗೂ ಆರ್.ಕಲೈಮತಿ ಅವರನ್ನೊಳಗೊಂಡ ರಜಾ ಪೀಠದ ಮುಂದೆ ಬಂದಿತ್ತಾದರೂ, ರಿಜಿಸ್ಟ್ರಾರ್ ಬಳಿ ಈ ಅರ್ಜಿಯನ್ನು ಮೊದಲು ಪಟ್ಟಿ ಮಾಡಿಸುವಂತೆ ನ್ಯಾಯ ಪೀಠವು ಅರ್ಜಿದಾರರಿಗೆ ಸೂಚಿಸಿತು.