ತಮಿಳುನಾಡು : ಕಾನೂನು ವಿವಿಯ ದಲಿತ ವಿದ್ಯಾರ್ಥಿಗೆ ಮೋಸದಿಂದ ಮೂತ್ರ ಕುಡಿಸಿದ ಸಹಪಾಠಿಗಳು
ತಮಿಳುನಾಡು ಕಾನೂನು ವಿವಿ| Photo: NDTV
ತಿರುಚ್ಚಿ: ತನ್ನ ಸಹಪಾಠಿಗಳು ತನಗೆ ಮೋಸದಿಂದ ಮೂತ್ರವನ್ನು ಕುಡಿಸಿದ್ದಾರೆ ಎಂದು ಆರೋಪಿಸಿ 22ರ ಹರೆಯದ ದಲಿತ ವಿದ್ಯಾರ್ಥಿ ಸಲ್ಲಿಸಿರುವ ದೂರಿನ ಕುರಿತು ತಿರುಚ್ಚಿಯಲ್ಲಿನ ತಮಿಳುನಾಡು ಕಾನೂನು ವಿವಿಯು ವಿಚಾರಣೆಯನ್ನು ಕೈಗೊಂಡಿದೆ.
ಜ.6ರಂದು ಕಾಲೇಜಿನ ಆವರಣದಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳ ಸಮ್ಮೇಳನದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ.
ದಲಿತ ಸಮುದಾಯದ ಓರ್ವ ವಿದ್ಯಾರ್ಥಿ ಮತ್ತು ಮಧ್ಯಮ ಜಾತಿಗೆ ಸೇರಿದ ಇನ್ನೋರ್ವ ವಿದ್ಯಾರ್ಥಿ ಸೇರಿಕೊಂಡು ಕುಡ್ಡಲೂರು ಜಿಲ್ಲೆ ಮೂಲದ ಅಂತಿಮ ವರ್ಷದ ದಲಿತ ವಿದ್ಯಾರ್ಥಿಗೆ ಮೂತ್ರವನ್ನು ಬೆರೆಸಿದ್ದ ತಂಪು ಪಾನೀಯವನ್ನು ಮೋಸದಿಂದ ಕುಡಿಸಿದ್ದರು ಎನ್ನಲಾಗಿದೆ. ತಾನು ಮೋಸ ಹೋಗಿದ್ದು ಮರುದಿನ ವಿದ್ಯಾರ್ಥಿಗೆ ಗೊತ್ತಾದ ಬಳಿಕ ಆತ ಅಧ್ಯಾಪಕರಿಗೆ ದೂರು ಸಲ್ಲಿಸಿದ್ದಾನೆ ಎಂದು ಈ ಮೂಲಗಳು ತಿಳಿಸಿದವು.
ಈ ಬಗ್ಗೆ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ವಿವಿಯ ರಿಜಿಸ್ಟ್ರಾರ್ ಎಸ್.ಎಂ.ಬಾಲಕೃಷ್ಣನ್ ಅವರು,ದೂರಿನ ಮೇರೆಗೆ ಮುಂದಿನ ವಿಚಾರಣೆಯನ್ನು ನಡೆಸಲು ಮೂವರು ಸಹಾಯಕ ಪ್ರಾಧ್ಯಾಪಕರ ರ್ಯಾಗಿಂಗ್ ನಿಗ್ರಹ ಸಮಿತಿಯನ್ನು ರಚಿಸಲಾಗಿದ್ದು, ಅದು ಜ.18ರಂದು ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ತಿಳಿಸಿದರು.
ಸಮಿತಿಯ ವರದಿಯನ್ನು ಆಧರಿಸಿ ವಿವಿಯು ಮುಂದಿನ ಕ್ರಮವನ್ನು ಜರುಗಿಸಲಿದೆ ಎಂದ ಅವರು, ಆರೋಪಿಗಳು ತಪ್ಪಿತಸ್ಥರು ಎಂದು ಕಂಡು ಬಂದರೆ ಅವರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು ಮತ್ತು ಪೋಲಿಸರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.