ತಮಿಳುನಾಡು: ಪರೀಕ್ಷೆ ಬರೆಯಲು ಹೋಗುತ್ತಿದ್ದ ದಲಿತ ವಿದ್ಯಾರ್ಥಿಯ ಬೆರಳು ಕತ್ತರಿಸಿದ ದುಷ್ಕರ್ಮಿಗಳು
ಬಾಲಕನ ತಂದೆಯ ಮೇಲೂ ಹಲ್ಲೆ

ಸಾಂದರ್ಭಿಕ ಚಿತ್ರ (credit: newindianexpress.com)
ಚೆನ್ನೈ: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಹೋಗುತ್ತಿದ್ದಾಗ ದಲಿತ ವಿದ್ಯಾರ್ಥಿಯ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ಹಲ್ಲೆ ನಡೆಸಿ, ಬೆರಳುಗಳನ್ನು ಕತ್ತರಿಸಿದ ಘಟನೆ ನಡೆದಿದೆ.ದಿನಗೂಲಿ ನೌಕರನಾಗಿರುವ ತಂಗ ಗಣೇಶ್ ಅವರ ಮಗ, 11 ನೇ ತರಗತಿಯ ಬಾಲಕ ದೇವೇಂದ್ರನ್, ತನ್ನ ಮನೆಯಿಂದ ಪಳಯಂಕೊಟ್ಟೈನಲ್ಲಿರುವ ಶಾಲೆಗೆ ಪರೀಕ್ಷೆ ಬರೆಯಲು ಹೋಗುತ್ತಿದ್ದಾಗ ಆತನ ಮೇಲೆ ಹಲ್ಲೆ ನಡೆಸಲಾಗಿದೆ.
ಮಾರ್ಗ ಮಧ್ಯದಲ್ಲಿ, ಮೂವರು ವ್ಯಕ್ತಿಗಳು ಬಸ್ ಅನ್ನು ತಡೆದು ನಿಲ್ಲಿಸಿ, ದೇವೇಂದ್ರನ್ ನನ್ನು ಬಸ್ನಿಂದ ಹೊರಗೆ ಎಳೆದುಕೊಂಡು ಹೋಗಿ ಅವರ ಎಡಗೈಯ ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ. ಈ ಗುಂಪು ತಂದೆ ತಂಗ ಗಣೇಶ್ ಅವರ ಮೇಲೂ ಹಲ್ಲೆ ನಡೆಸಿದ್ದು, ಅವರ ತಲೆ ಸೇರಿದಂತೆ ದೇಹದ ವಿವಿಧೆಡೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇತ್ತೀಚೆಗೆ ನಡೆದ ಕಬಡ್ಡಿ ಪಂದ್ಯಾಟದಲ್ಲಿ ದೇವೇಂದ್ರನ್ ತಂಡವು ಎದುರಾಳಿ ತಂಡವನ್ನು ಮಣಿಸಿದ್ದೇ ಈ ಕೃತ್ಯ ಎಸಗಲು ಕಾರಣ. ಉತ್ತಮ ಕಬಡ್ಡಿ ಆಟಗಾರನಾಗಿದ್ದ ದೇವೇಂದ್ರನ್ ಆ ಪಂದ್ಯಾಟದ ಗೆಲುವಿಗೆ ಮುಖ್ಯ ಕಾರಣರಾಗಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ವೇಳೆ, ಇತರ ಪ್ರಯಾಣಿಕರು ಮಧ್ಯಪ್ರವೇಶಿಸುತ್ತಿದ್ದಂತೆ ದಾಳಿಕೋರರ ತಂಡ ಸ್ಥಳದಿಂದ ಪರಾರಿಯಾಗಿದೆ.
ದೇವೇಂದ್ರನ್ ನನ್ನು ಶ್ರೀವೈಕುಂಡಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಆತನ ಬೆರಳುಗಳನ್ನು ಮತ್ತೆ ಜೋಡಿಸಲು ಶಸ್ತ್ರಚಿಕಿತ್ಸೆ ನಡೆಯುತ್ತಿದೆ.
ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ.
ತಂದೆ ಗಣೇಶ್ ಇಟ್ಟಿಗೆ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದು, ಈ ಘಟನೆ ಜಾತಿ ಸಂಬಂಧಿತ ಅಪರಾಧ ಎಂದು ಅವರು ಆರೋಪಿಸಿದ್ದಾರೆ.
“ಪಕ್ಕದ ಹಳ್ಳಿಯ ತೇವರ್ ಸಮುದಾಯಕ್ಕೆ ಸೇರಿದ ಮೂವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಜಾತಿ ಸಂಬಂಧಿತ ಅಪರಾಧ. ನಾವು ಎಸ್ಸಿ (ಪರಿಶಿಷ್ಟ ಜಾತಿ) ಸಮುದಾಯದವರು” ಎಂದು ತಂಗ ಗಣೇಶ್ ಹೇಳಿದ್ದಾರೆ.