ಕೋಮುವಾದಿ ಅಪಪ್ರಚಾರ, ತಪ್ಪು ಪ್ರಚಾರ ತಡೆಯಲು ವಾಸ್ತವಾಂಶ ಪತ್ತೆ ಘಟಕ ಸ್ಥಾಪಿಸಲು ತಮಿಳುನಾಡು ಸರಕಾರ ನಿರ್ಧಾರ
Photo- PTI
ಚೆನ್ನೈ: ತನ್ನ ವಿರುದ್ಧದ ಕೋಮುವಾದಿ ಅಪಪ್ರಚಾರ, ತಪ್ಪು ಪ್ರಚಾರ ಮತ್ತು ದ್ವೇಷಕಾರುವ ಮಾತುಗಳನ್ನು ನಿಭಾಯಿಸುವುದಕ್ಕಾಗಿ ವಾಸ್ತವಾಂಶ ಪತ್ತೆ ಘಟಕವೊಂದನ್ನು ಸ್ಥಾಪಿಸಲು ತಮಿಳುನಾಡು ಸರಕಾರವು ಆದೇಶವೊಂದನ್ನು ಹೊರಡಿಸಿದೆ.
80 ಸದಸ್ಯರನ್ನು ಒಳಗೊಂಡಿರುವ ವಾಸ್ತವಾಂಶ ಪತ್ತೆ ಘಟಕವು, ಎಲ್ಲಾ ಮಾಧ್ಯಮ ವೇದಿಕೆಗಳಲ್ಲಿ ಬರುವ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ವಾಸ್ತವಾಂಶ ತನಿಖೆಗೆ ಒಳಪಡಿಸುವುದು.
ಈ ಘಟಕವು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಸ್ವಯಂಪ್ರೇರಿತವಾಗಿ ಅಥವಾ ‘‘ವಿವಿಧ ಮೂಲಗಳಿಂದ ಬರುವ’’ ದೂರುಗಳ ಆಧಾರದಲ್ಲಿ ವಾಸ್ತವಾಂಶ ತನಿಖೆಗೆ ಒಳಪಡಿಸಬಹುದಾಗಿದೆ. ರಾಜ್ಯ ಸರಕಾರವು ಅಕ್ಟೋಬರ್ನಲ್ಲಿ ಈ ಆದೇಶವನ್ನು ಹೊರಡಿಸಿದೆ.
‘ಯೂ ಟರ್ನ್’ ಎಂಬ ಯೂಟ್ಯೂಬ್ ವಾಸ್ತವಾಂಶ ಪತ್ತೆ ಚಾನೆಲ್ ನಡೆಸುತ್ತಿದ್ದ ಇಯಾನ್ ಕಾರ್ತಿಕೇಯನ್ ಎಂಬವರನ್ನು ಈ ಘಟಕದ ಯೋಜನಾ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಅವರು ರಾಜ್ಯದ ಸಚಿವ ಉದಯನಿಧಿ ಸ್ಟಾಲಿನ್ ನೇತೃತ್ವದ ವಿಶೇಷ ಕಾರ್ಯಕ್ರಮ ಅನುಷ್ಠಾನ ಇಲಾಖೆಗೆ ವರದಿ ಮಾಡುತ್ತಾರೆ.
ಆಗಸ್ಟ್ನಲ್ಲಿ, ಕರ್ನಾಟಕದ ಕಾಂಗ್ರೆಸ್ ಸರಕಾರವೂ ಇಂಥದೇ ವಾಸ್ತವಾಂಶ ಪತ್ತೆ ಘಟಕವನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು.