ತಮಿಳುನಾಡು ವಿಧಾನಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ, ಏಕಕಾಲಿಕ ಚುನಾವಣೆಗಳ ವಿರುದ್ಧ ನಿರ್ಣಯ ಅಂಗೀಕಾರ
Photo: ANI
ಚೆನ್ನೈ: ಹೊಸದಾಗಿ ಜನಗಣತಿಯ ಬಳಿಕ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಹಾಗೂ ವಿಧಾನಸಭೆಗಳು ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಕೇಂದ್ರದ ‘ಒಂದು ದೇಶ,ಒಂದು ಚುನಾವಣೆ ’ಪ್ರಸ್ತಾವದ ವಿರುದ್ಧ ತಮಿಳುನಾಡು ವಿಧಾನಸಭೆಯು ಬುಧವಾರ ಪ್ರತ್ಯೇಕ ನಿರ್ಣಯಗಳನ್ನು ಅಂಗೀಕರಿಸಿದೆ. ರಾಜ್ಯ ವಿಧಾನಸಭೆಯೊಂದು ಈ ನಿರ್ಣಯಗಳನ್ನು ಅಂಗೀಕರಿಸಿರುವುದು ಇದೇ ಮೊದಲು.
ಕ್ಷೇತ್ರ ಪುನರ್ವಿಂಗಡಣೆ ಯೋಜನೆ ವಿರುದ್ಧ ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಅವರು, ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿರುವ ತಮಿಳುನಾಡಿನಂತಹ ರಾಜ್ಯಗಳನ್ನು ದಂಡಿಸಬಾರದು ಮತ್ತು ಜನಸಂಖ್ಯಾ ನಿಯಂತ್ರಣದಲ್ಲಿ ವಿಫಲಗೊಂಡ ರಾಜ್ಯಗಳನ್ನು ಪುರಸ್ಕರಿಸಬಾರದು ಎಂದು ಹೇಳಿದರು. ಈ ಅಂಶಗಳನ್ನು ಪರಿಗಣಿಸದೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ನಡೆಸಿದರೆ ದಕ್ಷಿಣದ ರಾಜ್ಯಗಳು ಅಧಿಕಾರ ಮತ್ತು ಹಕ್ಕುಗಳೆರಡನ್ನೂ ಕಳೆದುಕೊಳ್ಳುತ್ತವೆ ಎಂದರು.
1971ರಲ್ಲಿ ತಮಿಳುನಾಡು ಮತ್ತು ಬಿಹಾರಗಳಲ್ಲಿ ಜನಸಂಖ್ಯೆ ಒಂದೇ ರೀತಿಯಲ್ಲಿತ್ತು ಎಂದು ಬೆಟ್ಟು ಮಾಡಿದ ಸ್ಟ್ಯಾಲಿನ್, ಆದರೆ ಕಳೆದ ಐದು ದಶಕಗಳಲ್ಲಿ ಬಿಹಾರದ ಜನಸಂಖ್ಯೆಯು ತಮಿಳುನಾಡಿಗೆ ಹೋಲಿಸಿದರೆ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದರು. ‘ಈಗಾಗಲೇ 39 ಸಂಸದರನ್ನು ಹೊಂದಿದ್ದರೂ ಸಂಸತ್ತಿನಲ್ಲಿ ನಮ್ಮ ಬೇಡಿಕೆಗಳನ್ನು ಕಡೆಗಣಿಸಲಾಗುತ್ತಿದೆ. ಈ ಸಂಖ್ಯೆ ಇನ್ನೂ ಕುಸಿದರೆ ಏನಾಗಬಹುದು ’ಎಂದು ಅವರು ಪ್ರಶ್ನಿಸಿದರು.
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯು ಪ್ರಸ್ತುತ ಪುನರ್ಪರಿಶೀಲಿಸುತ್ತಿರುವ ‘ಒಂದು ದೇಶ,ಒಂದು ಚುನಾವಣೆ ’ಯೋಜನೆಯನ್ನು ಸ್ಟ್ಯಾಲಿನ್ ವಿರೋಧಿಸಿದರು. ಈ ಯೋಜನೆಯು ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ಅಪಾಯಕಾರಿಯಾಗಿದೆ, ಅಪ್ರಾಯೋಗಿಕವಾಗಿದೆ ಮತ್ತು ಇದನ್ನು ಭಾರತದ ಸಂವಿಧಾನದಲ್ಲಿ ಹೇಳಲಾಗಿಲ್ಲ. ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯ ದೇಶದಲ್ಲಿ ಜನಕೇಂದ್ರಿತ ವಿಷಯಗಳ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳು, ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿಗೆ ಚುನಾವಣೆಗಳು ಬೇರೆ ಬೇರೆ ಸಮಯದಲ್ಲಿ ನಡೆಯುತ್ತವೆ ಎಂದರು.
ಕಾಂಗ್ರೆಸ್ ಸೇರಿದಂತೆ ಡಿಎಂಕೆಯ ಮಿತ್ರಪಕ್ಷಗಳು ನಿರ್ಣಯವನ್ನು ಬೆಂಬಲಿಸಿದವು. ಚುನಾವಣೆಗಳಿಗೆ ಭಾರೀ ವೆಚ್ಚವಾಗುತ್ತದೆ ಎನ್ನುವುದು ಸುಳ್ಳು, ಅದು ದೇಶದ ಬಜೆಟ್ ನ ಶೇ.1ಕ್ಕೂ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಕೆ.ಸೆಲ್ವಪೆರುಂತಗೈ ಹೇಳಿದರು. ಇತ್ತೀಚಿಗೆ ಬಿಜೆಪಿಯೊಂದಿಗೆ ಸಂಬಂಧವನ್ನು ಕಡಿದುಕೊಂಡಿರುವ ಮುಖ್ಯ ಪ್ರತಿಪಕ್ಷ ಎಐಎಡಿಎಂಕೆ ‘ಒಂದು ದೇಶ,ಒಂದು ಚುನಾವಣೆ ’ ಯೋಜನೆಗೆ ಷರತ್ತುಬದ್ಧ ಬೆಂಬಲವನ್ನು ಮುಂದಿರಿಸಿತು. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ವಿರುದ್ಧ ನಿರ್ಣಯವನ್ನು ಅದು ಬೆಂಬಲಿಸಿತು.
ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಅವರು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ವಿರುದ್ಧ ನಿರ್ಣಯವನ್ನು ಬೆಂಬಲಿಸಿದರಾದರೂ ‘ಒಂದು ದೇಶ,ಒಂದು ಚುನಾವಣೆ ’ಪ್ರಸ್ತಾವದ ವಿರುದ್ಧದ ನಿರ್ಣಯವನ್ನು ವಿರೋಧಿಸಿದರು.