ತಮಿಳುನಾಡು | ಇನ್ನೊಬ್ಬ ರಾಜಕೀಯ ನಾಯಕನ ಕೊಲೆ
ಬಾಲಸುಬ್ರಮಣ್ಯನ್ | PC : indiatoday.in
ಚೆನ್ನೈ : ತಮಿಳುನಾಡಿನ ಮದುರೈಯಲ್ಲಿ ಮಂಗಳವಾರ ಅಪರಿಚಿತ ತಂಡವೊಂದು ನಾಮ್ ತಮಿಳರ್ ಕಚ್ಚಿ ಪಕ್ಷದ ನಾಯಕ ಬಾಲಸುಬ್ರಮಣ್ಯನ್ರನ್ನು ಕಡಿದು ಕೊಂದಿದೆ. ಬಹುಜನ ಸಮಾಜ ಪಕ್ಷದ ರಾಜ್ಯ ಮುಖ್ಯಸ್ಥ ಕೆ. ಆರ್ಮ್ಸ್ಟ್ರಾಂಗ್ರ ಭೀಕರ ಕೊಲೆ ನಡೆದ ಒಂದು ವಾರದ ಬಳಿಕ ಈ ಕೊಲೆ ನಡೆದಿರುವುದು ಜನರನ್ನು ಬೆಚ್ಚಿಬೀಳಿಸಿದೆ.
ಬಾಲಸುಬ್ರಮಣ್ಯನ್ ಮುಂಜಾನೆಯ ನಡಿಗೆಯಲ್ಲಿದ್ದಾಗ ದುಷ್ಕರ್ಮಿಗಳು ಅವರನ್ನು ಬೆನ್ನಟ್ಟಿ ಕೊಲೆಗೈದಿದ್ದಾರೆ ಎನ್ನಲಾಗಿದೆ.
ಅವರ ಕೊಲೆಯಲ್ಲಿ ಯಾವುದೇ ರಾಜಕೀಯ ಉದ್ದೇಶವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನಾಮ್ ತಮಿಳರ್ ಕಚ್ಚಿಯ ಮುಖ್ಯ ಸಮನ್ವಯಕಾರ ಸೀಮನ್ ಪಕ್ಷದ ನಾಯಕನ ಕೊಲೆಯನ್ನು ಖಂಡಿಸಿದ್ದಾರೆ ಮತ್ತು ಪಾತಕಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
‘‘ಬಾಲಸುಬ್ರಮಣ್ಯನ್ರ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸದಿದ್ದರೆ ನಾವು ಪ್ರತಿಭಟನೆ ನಡೆಸುತ್ತೇವೆ’’ ಎಂದು ಸೀಮನ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಬಾಲಸುಬ್ರಮಣ್ಯಮ್ ತಮಿಳು ರಾಷ್ಟ್ರೀಯವಾದಿ ಪಕ್ಷ ನಾಮ್ ತಮಿಳರ್ ಕಚ್ಚಿಯ ಮದುರೈ ಜಿಲ್ಲಾ ಉಪ ಕಾರ್ಯದರ್ಶಿಯಾಗಿದ್ದಾರೆ.