ತಮಿಳುನಾಡು, ಪೆರಿಯಾರ್ಗೆ ಕೇಂದ್ರ ಸರಕಾರದಿಂದ ಅವಮಾನ: ಉದಯನಿಧಿ ಸ್ಟಾಲಿನ್

ಉದಯನಿಧಿ ಸ್ಟಾಲಿನ್ | PTI
ಚೆನ್ನೈ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತಮಿಳುನಾಡನ್ನು ಹಾಗೂ ದ್ರಾವಿಡ ಚಳವಳಿಯ ನಾಯಕ ದಿವಂಗತ ಪೆರಿಯಾರ್ ಅವರನ್ನು ಅಪಮಾನಿಸುತ್ತಿದೆಯೆಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಆಪಾದಿಸಿದ್ದಾರೆ.
ಚೆನ್ನೈನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಎಂಕೆ ಸಂಸದರನ್ನು ಅನಾಗರಿಕರೆಂದು ಕರೆದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘‘ ನಮ್ಮನ್ನು ಯಾರು ಅನಾಗರಿಕರೆಂದು ಕರೆಯುತ್ತಾರೋ ಅವರು ಅನಾಗರಿಕವಾದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಹಾಗೂ ಅವರಿಗೆ ತಮಿಳುನಾಡಿನ ಜನತೆ ಶೀಘ್ರದಲ್ಲೇ ಸೂಕ್ತ ಉತ್ತರವನ್ನು ನೀಡಲಿದ್ದಾರೆ’’ ಎಂದು ಉದಯಾನಿಧಿ ತಿಳಿಸಿದರು.
ಲೋಕಸಭೆಯಲ್ಲಿ ನೂತನ ಶಿಕ್ಷಣ ನೀತಿಗೆ ಸಂಬಂಧಿಸಿ ಚರ್ಚೆಯ ಸಂದರ್ಭ ಡಿಎಂಕೆಯ ಸಂಸತ್ ಸದಸ್ಯರನ್ನು ಅನಾಗರಿಕರೆಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಟೀಕಿಸಿದ್ದುದು, ರಾಜಕೀಯ ವಿವಾದವಾಗಿ ಪರಿಣಮಿಸಿತ್ತು.
‘‘ಕೇಂದ್ರ ಸರಕಾರವು ತಮಿಳುನಾಡು ಹಾಗೂ ಪೆರಿಯಾರ್ ಅವರನ್ನು ಅಪಮಾನಿಸುತ್ತಿದೆ. ನಾವು ಅನಾಗರಿಕರೇ? ವಾಸ್ತವಿಕವಾಗಿ ನಮ್ಮನ್ನು ಯಾರು ಅನಾಗರಿಕರೆಂದು ಕರೆಯುತ್ತಾರೋ ಅವರೇ ಅನಾಗರಿಕ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಹಾಗೂ ನಮ್ಮ ವಿರುದ್ಧ ಟೀಕೆಗಳನ್ನು ಮಾಡುತ್ತಾರೆ. ತಮಿಳುನಾಡಿನ ಜನತೆ ಶೀಘ್ರದಲ್ಲೇ ಅವರಿಗೆ ಸೂಕ್ತ ಉತ್ತರವನ್ನು ನೀಡಲಿದ್ದಾರೆ’’ ಎಂದರು.
ಡಿಎಂಕೆ ಸಂಸದರನ್ನು ಅನಾಗರಿಕರು ಎಂದು ನಿಂದಿಸಿದ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.ಡಿಎಂಕೆ ಸಂಸದರು ಸಂಸತ್ನಲ್ಲಿ ಪ್ರತಿಭಟನೆ ನಡೆಸಿ ಧರ್ಮೇಂದ್ರ ಪ್ರಧಾನ್ ಅವರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದರು ಹಾಗೂ ಸಂಪುಟದಿಂದ ಅವರನ್ನು ಕೈಬಿಡಬೇಕೆಂದು ಆಗ್ರಹಿಸಿದ್ದರು.