ತಮಿಳುನಾಡು| ಕಳ್ಳಭಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 54ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
ಕಲ್ಲಕುರಿಚಿ/ಚೆನ್ನೈ: ಕರುಣಾಪುರಂನಲ್ಲಿ ಕಲಬೆರಕೆ ಮದ್ಯ ಸೇವಿಸಿ ಅಸ್ವಸ್ಥರಾಗಿದ್ದ ಇನ್ನೂ ನಾಲ್ಕು ಮಂದಿ ಮೃತರಾಗುವ ಮೂಲಕ ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಮೃತರ ಪೈಕಿ 48 ಮಂದಿ ಪುರುಷರು ಹಾಗೂ ಆರು ಮಂದಿ ಮಹಿಳೆಯರು ಸೇರಿದ್ದಾರೆ. ಶುಕ್ರವಾರ-ಶನಿವಾರ ಮಧ್ಯರಾತ್ರಿಯ ನಡುವೆ ಮೃತಪಟ್ಟಿರುವವರಲ್ಲಿ ಬಹುತೇಕರು ಕರುಣಾಪುರಂ ಗ್ರಾಮದವರು ಎಂದು ವರದಿಯಾಗಿದೆ.
ಸಕರಾರಿ ಕಲ್ಲಕುರಿಚಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 30 ಮಂದಿ ಮೃತಪಟ್ಟಿದ್ದರೆ, 17 ಮಂದಿ ಸೇಲಂನ ಸರಕಾರಿ ಮೋಹನ್ ಕುಮಾರಮಂಗಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಾಲ್ಕು ಮಂದಿ ಸರಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರೆ, ಮೂರು ಮಂದಿ ಪುದುಚೇರಿಯ ಜವಾಹರಲಾಲ್ ನೆಹರೂ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮೃತಪಟ್ಟಿದ್ದಾರೆ.
ಆರು ಮಂದಿ ಮಹಿಳೆಯರು ಹಾಗೂ ಓರ್ವ ಲಿಂಗಾಂತರಿ ಸೇರಿದಂತೆ ಉಳಿದ 142 ಮಂದಿ ಸರಕಾರಿ ಕಲ್ಲಕುರಿಚಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಸೇಲಂನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹಾಗೂ ಪುದುಚೇರಿಯ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ, ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ, ಪಿಎಂಕೆ ಸಂಸ್ಥಾಪಕ ಎಸ್.ರಾಮದಾಸ್ ಕಳ್ಳಭಟ್ಟಿ ದುರಂತದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.