6.5 ಲಕ್ಷ ಕೋಟಿ ತಲುಪಿದ ತೆರಿಗೆ ಸಂಗ್ರಹ: ಶೇಕಡ 23 ಪ್ರಗತಿ
Photo: freepik
ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಜುಲೈ 11ರವರೆಗೆ ನೇರ ತೆರಿಗೆ ಸಂಗ್ರಹ ಶೇಕಡ 23ರಷ್ಟು ಪ್ರಗತಿ ಸಾಧಿಸಿ 6,34,239 ಕೋಟಿ ರೂಪಾಯಿ ತಲುಪಿದೆ. ವೈಯಕ್ತಿಕ ಆದಾಯ ತೆರಿಗೆಯಲ್ಲಿ ಗಣನೀಯ ಹೆಚ್ಚಳ ಇದಕ್ಕೆ ಪ್ರಮುಖ ಕಾರಣ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಹೇಳಿದೆ.
ನಿವ್ವಳ ಹೆಚ್ಚಳ ಶೇಕಡ 19.5ರಷ್ಟು ಹೆಚ್ಚಾಗಿದ್ದು, ಸುಮಾರು 5.7 ಲಕ್ಷ ಕೊಟಿ ಆಗಿದೆ. ಮರುಪಾವತಿ ಪ್ರಮಾಣ ಕೂಡಾ ಶೇಕಡ 65ರಷ್ಟು ಹೆಚ್ಚಿದ್ದು, ಈ ಅವಧಿಯಲ್ಲಿ 70,902 ಕೋಟಿ ರೂಪಾಯಿಗಳಾಗಿವೆ ಎಂದು ಪ್ರಕಟಣೆ ತಿಳಿಸಿದೆ.
ಒಟ್ಟಾರೆಯಾಗಿ ಕಾರ್ಪೊರೇಟ್ ತೆರಿಗೆ ಸಂಗ್ರಹ ಶೇಕಡ 20.4ರಷ್ಟು ಅಧಿಕವಾಗಿ, 2,65 ಲಕ್ಷ ಕೋಟಿ ತಲುಪಿದೆ. ಸೆಕ್ಯೂರಿಟಿ ವ್ಯವಹಾರಗಳ ತೆರಿಗೆ ಸೇರಿದಂತೆ ವೈಯಕ್ತಿಕ ತೆರಿಗೆ ಶೇಕಡ 25.3ರಷ್ಟು ಹೆಚ್ಚಿ 3.8 ಲಕ್ಷ ಕೋಟಿ ಆಗಿದೆ.
"ಕಾರ್ಪೊರೇಟ್ ಲಾಭ ಗಣನೀಯವಾಗಿ ಹೆಚ್ಚಿರುವುದು ಮೊದಲ ತ್ರೈಮಾಸಿಕದ ಮುಂಗಡ ಸಂಗ್ರಹದಲ್ಲಿ ಸ್ಪಷ್ಟವಾಗಿ ಗೊತ್ತಾಗಿದೆ. ಏರುಗತಿಯಲ್ಲಿರುವ ಷೇರು ಮಾರುಕಟ್ಟೆ ಕೂಡ ಷೇರು ವಹಿವಾಟು ತೆರಿಗೆಯ ಹೆಚ್ಚಳಕ್ಕೆ ಕಾರಣವಾಗಿದೆ" ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ರೋಹಿಂಟನ್ ಸಿಧ್ವಾ ಹೇಳಿದ್ದಾರೆ.