ಝೊಮ್ಯಾಟೊಗೆ 11.82 ಕೋಟಿ ರೂ.ಗಳ ತೆರಿಗೆ ದಂಡದ ನೋಟಿಸ್ ಜಾರಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆನ್ಲೈನ್ ಫುಡ್ ಡೆಲಿವರಿ ಪ್ಲ್ಯಾಟ್ಫಾರ್ಮ್ ಝೊಮ್ಯಾಟೊಗೆ 11.82 ಕೋಟಿ ರೂ.ಗಳ ಹೆಚ್ಚುವರಿ ತೆರಿಗೆ ಮತ್ತು ದಂಡವನ್ನು ಪಾವತಿಸುವಂತೆ ನೋಟಿಸನ್ನು ಜಾರಿಗೊಳಿಸಲಾಗಿದೆ. ಇದು ಜುಲೈ 2017 ಮತ್ತು ಮಾರ್ಚ್ 2021ರ ನಡುವೆ ಝೊಮ್ಯಾಟೊ ಭಾರತದ ಹೊರಗಿರುವ ತನ್ನ ಅಂಗಸಂಸ್ಥೆಗಳಿಗೆ ಒದಗಿಸಿದ್ದ ರಫ್ತು ಸೇವೆಗಳ ಮೇಲಿನ ಜಿಎಸ್ಟಿಗೆ ಸಂಬಂಧಿಸಿದ್ದಾಗಿದೆ.
ಗುರುಗ್ರಾಮದ ಜಿಎಸ್ಟಿ ಹೆಚ್ಚುವರಿ ಆಯುಕ್ತರು ಈ ನೋಟಿಸನ್ನು ಹೊರಡಿಸಿದ್ದು, ಅನ್ವಯವಾಗುವ ಬಡ್ಡಿಯೊಂದಿಗೆ 5,90,94,889 ಕೋಟಿ ರೂ.ಗಳ ಹೆಚ್ಚುವರಿ ಜಿಎಸ್ಟಿ ಮತ್ತು 5,90,94,889 ಕೋಟಿ ರೂ.ಗಳ ದಂಡವನ್ನು ಪಾವತಿಸುವಂತೆ ಸೂಚಿಸಲಾಗಿದೆ.
ಕಂಪನಿಯು ಈ ಆದೇಶದ ವಿರುದ್ಧ ಸೂಕ್ತ ಪ್ರಾಧಿಕಾರದ ಮುಂದೆ ಮೇಲ್ಮನವಿಯನ್ನು ಸಲ್ಲಿಸಲಿದೆ ಎಂದು ಝೊಮ್ಯಾಟೊ ತಿಳಿಸಿದೆ.
ಶೋಕಾಸ್ ನೋಟಿಸ್ಗೆ ನೀಡಿದ್ದ ತನ್ನ ಉತ್ತರದಲ್ಲಿ ಕಂಪೆನಿಯು ಆರೋಪಗಳ ಕುರಿತು ಸ್ಪಷ್ಟನೆಯ ಜೊತೆಗೆ ಪೂರಕ ದಾಖಲೆಗಳು ಮತ್ತು ನ್ಯಾಯಾಂಗದ ಪೂರ್ವ ನಿದರ್ಶನಗಳನ್ನು ಒದಗಿಸಿತ್ತು. ಆದರೆ ಆದೇಶವನ್ನು ಹೊರಡಿಸುವಾಗ ಅಧಿಕಾರಿಗಳು ಇದನ್ನು ಪರಿಗಣಿಸಿಲ್ಲವೆಂದು ತೋರುತ್ತಿದೆ ಎಂದು ಅದು ಹೇಳಿದೆ.