ನಾಳೆ ಎರಡನೇ ಏಕದಿನ ಪಂದ್ಯ | ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ

ಸಾಂದರ್ಭಿಕ ಚಿತ್ರ | PC : PTI
ಕಟಕ್: ನಾಗ್ಪುರದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು 4 ವಿಕೆಟ್ಗಳಿಂದ ಗೆದ್ದಿರುವ ಭಾರತ ಕ್ರಿಕೆಟ್ ತಂಡವು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ರವಿವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2ನೇ ಪಂದ್ಯ ಜಯಿಸಿ ಸರಣಿ ಗೆಲ್ಲುವ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾವು ಎರಡು ಪ್ರಮುಖ ಸವಾಲುಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.
ನಾಯಕ ರೋಹಿತ್ ಶರ್ಮಾ ದೀರ್ಘ ಸಮಯದಿಂದ ಎದುರಿಸುತ್ತಿರುವ ರನ್ ಬರ ಹಾಗೂ ವಿರಾಟ್ ಕೊಹ್ಲಿ ಮರಳಿಕೆಯಿಂದ ಎದುರಾಗಲಿರುವ ಆಯ್ಕೆ ಕುರಿತು ಗೊಂದಲವನ್ನು ಆತಿಥೇಯರು ಪರಿಹರಿಸಿಕೊಳ್ಳಬೇಕಾದ ಅಗತ್ಯವಿದೆ.
ಬಲ ಮೊಣಕಾಲಿನ ಊತದಿಂದಾಗಿ ವಿರಾಟ್ ಕೊಹ್ಲಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಆರಂಭವಾಗಿರುವಾಗ ಕೊಹ್ಲಿ ಅವರ ಫಿಟ್ನೆಸ್ ಕುರಿತು ಕಳವಳ ವ್ಯಕ್ತವಾಗಿದೆ. ಕೊಹ್ಲಿ 2ನೇ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಉಪ ನಾಯಕ ಶುಭಮನ್ ಗಿಲ್ ಸುಳಿವು ನೀಡಿದ್ದಾರೆ. ಕಟಕ್ನಲ್ಲಿ ನಿರಾಳವಾಗಿದ್ದಂತೆ ಕಂಡುಬಂದಿರುವ ಕೊಹ್ಲಿ ಅವರು ಆಡುವ 11ರ ಬಳಗಕ್ಕೆ ವಾಪಸಾಗಲು ಸಜ್ಜಾಗಿದ್ದಾರೆ.
ಕೊಹ್ಲಿ ಮರಳಿಕೆಯಿಂದ ಆಯ್ಕೆ ವೇಳೆ ಗೊಂದಲ ಉಂಟಾಗಲಿದೆ. ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಕೊಹ್ಲಿ ಅವರ ಬದಲಿಗೆ ಅಡುವ 11ರ ಬಳಗ ಸೇರಿದ್ದರು. 36 ಎಸೆತಗಳಲ್ಲಿ 59 ರನ್ ಗಳಿಸಿದ್ದ ಅಯ್ಯರ್ ಲಭಿಸಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಹೀಗಾಗಿ ಅವರನ್ನು ಆಡುವ ಬಳಗದಿಂದ ಹೊರಗಿಡುವುದು ಕಷ್ಟಕರವಾಗಿದೆ. ಕೊಹ್ಲಿ ಆಡುವ 11ರ ಬಳಗಕ್ಕೆ ವಾಪಸಾದಾಗಲೆಲ್ಲಾ ಅಯ್ಯರ್ ಸ್ಥಾನ ಬಿಟ್ಟುಕೊಟ್ಟಿದ್ದರು. ಯಶಸ್ವಿ ಜೈಸ್ವಾಲ್ ನಾಗ್ಪುರದಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಕಾರಣ ಗಿಲ್ ಹಾಗೂ ರೋಹಿತ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಕೊಹ್ಲಿ ಸ್ವತಃ ರನ್ಗಾಗಿ ಪರದಾಡುತ್ತಿದ್ದಾರೆ. ಆಸ್ಟ್ರೇಲಿಯದಲ್ಲಿ ಒಂದೇ ರೀತಿಯ ಎಸೆತದಲ್ಲಿ ಪದೇ ಪದೇ ಔಟಾಗಿದ್ದ ಕೊಹ್ಲಿ ಟೀಕೆಗೆ ಗುರಿಯಾಗಿದ್ದರು. ಇತ್ತೀಚೆಗೆ 13 ವರ್ಷಗಳ ನಂತರ ರಣಜಿ ಪಂದ್ಯದಲ್ಲಿ ಆಡಿದ್ದ ಕೊಹ್ಲಿ ರೈಲ್ವೇಸ್ ತಂಡದ ವೇಗದ ಬೌಲರ್ ಹಿಮಾಂಶು ಸಾಂಗ್ವಾನ್ ವಿರುದ್ಧ ಕೇವಲ 6 ರನ್ ಗಳಿಸಿ ಔಟಾಗಿದ್ದರು.
ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಯಾವಾಗಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಸಚಿನ್ ತೆಂಡುಲ್ಕರ್(18,426 ರನ್)ಹಾಗೂ ಕುಮಾರ ಸಂಗಕ್ಕರ(14,234 ರನ್)ನಂತರ ಏಕದಿನ ಕ್ರಿಕೆಟ್ನಲ್ಲಿ 14,000 ರನ್ ಪೂರೈಸಿದ ಮೂರನೇ ಬ್ಯಾಟರ್ ಎನಿಸಿಕೊಂಡು ಇತಿಹಾಸ ನಿರ್ಮಿಸಲು ಕೊಹ್ಲಿಗೆ ಕೇವಲ 94 ರನ್ ಅಗತ್ಯವಿದೆ. ಈ ತನಕ 283 ಏಕದಿನ ಇನಿಂಗ್ಸ್ ಆಡಿರುವ ಕೊಹ್ಲಿ, ತೆಂಡುಲ್ಕರ್(350 ಇನಿಂಗ್ಸ್)ಹಾಗೂ ಸಂಗಕ್ಕರ(378)ನಂತರ ವೇಗವಾಗಿ 14 ಸಾವಿರ ಮೈಲಿಗಲ್ಲು ತಲುಪಿದ ಆಟಗಾರನಾಗುವ ಹೊಸ್ತಿಲಲ್ಲಿದ್ದಾರೆ.
ಇದೇ ವೇಳೆ, ರೋಹಿತ್ ಶರ್ಮಾ ಅವರು ನಾಗ್ಪುರದಲ್ಲಿ ಕೇವಲ 2 ರನ್ಗೆ ಔಟಾಗಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದರು. ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯಲ್ಲಿ ತೋರಿದ್ದ ಕಳಪೆ ಪ್ರದರ್ಶನವನ್ನು ಇಲ್ಲೂ ಮುಂದುವರಿಸಿದ್ದರು. ರೋಹಿತ್ ಕಳೆದ ವರ್ಷ ಆಗಸ್ಟ್ನಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ 64 ರನ್ ಗಳಿಸಿದ ನಂತರ ಯಾವುದೇ ಮಾದರಿಯ ಕ್ರಿಕೆಟ್ನಲ್ಲಿ ಅರ್ಧಶತಕವನ್ನು ಗಳಿಸಿಲ್ಲ.
ಗಾಯದಿಂದ ಚೇತರಿಸಿಕೊಂಡು ವಾಪಾಗಿರುವ ಮುಹಮ್ಮದ್ ಶಮಿ ತನ್ನ ಲಯವನ್ನು ಕಂಡುಕೊಂಡಿದ್ದು, ಭಾರತದ ಬೌಲಿಂಗ್ ವಿಭಾಗ ಸ್ಥಿರವಾಗಿರುವಂತೆ ಕಂಡುಬಂದಿದೆ. ಶಮಿ ಅವರು ನಾಗ್ಪುರದಲ್ಲಿ ಮೇಡನ್ ಓವರ್ ಸಹಿತ 8 ಓವರ್ಗಳ ಸ್ಪೆಲ್ನಲ್ಲಿ 38 ರನ್ ನೀಡಿ 1 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಚೊಚ್ಚಲ ಪಂದ್ಯವನ್ನಾಡಿದ್ದ ಹರ್ಷಿತ್ ರಾಣಾ ಆರಂಭದಲ್ಲಿ ಫಿಲ್ ಸಾಲ್ಟ್ ಎದುರು ಹೆಚ್ಚು ರನ್ ಬಿಟ್ಟುಕೊಟ್ಟಿದ್ದರೂ ಆ ನಂತರ ಒಂದೇ ಓವರ್ನಲ್ಲಿ ಬೆನ್ ಡಕೆಟ್ ಹಾಗೂ ಹ್ಯಾರಿ ಬ್ರೂಕ್ ವಿಕೆಟ್ಗಳನ್ನು ಉರುಳಿಸಿದ್ದರು. ಜಸ್ಪ್ರಿತ್ ಬುಮ್ರಾರ ಫಿಟ್ನೆಸ್ ಸಮಸ್ಯೆ ತಲೆನೋವಿಗೆ ಕಾರಣವಾಗಿದ್ದು, ಮತ್ತೊಂದು ಉತ್ತಮ ಪ್ರದರ್ಶನದ ಮೂಲಕ ಬುಮ್ರಾ ಅನುಪಸ್ಥಿತಿಯ ಲಾಭ ಪಡೆಯಲು ರಾಣಾ ಬಯಸಿದ್ದಾರೆ.
ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡಕ್ಕೆ ಸರಣಿಯಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ನಾಗ್ಪುರದ ವಾತಾವರಣಕ್ಕೆ ಹೊಂದಿಕೊಳ್ಳಲು ವಿಫಲವಾಗಿದ್ದ ಬಟ್ಲರ್ ಬಳಗವು ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ಗೆ ಮುಂದಾಗಿ ಎಡವಿತ್ತು. ಕಟಕ್ನ ಬಾರಬತಿ ಕ್ರೀಡಾಂಗಣದ ಪಿಚ್ ಭಾರತದ ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುವ ಸಾಧ್ಯತೆ ಇರುವ ಕಾರಣ ಇಂಗ್ಲೆಂಡ್ ತನ್ನ ರಣತಂತ್ರ ಬದಲಿಸಬೇಕಾಗಿದೆ.
ಕಟಕ್ನಲ್ಲಿ ನಡೆದಿರುವ ಏಕದಿನ ಪಂದ್ಯದಲ್ಲಿ ಭಾರತವು ಉತ್ತಮ ದಾಖಲೆ ಹೊಂದಿರುವ ಹಿನ್ನೆಲೆಯಲ್ಲಿ ಆಂಗ್ಲರು ಕಠಿಣ ಸವಾಲು ಎದುರಿಸಬೇಕಾಗಿದೆ. ಭಾರತ ಈ ಮೈದಾನದಲ್ಲಿ ಆಡಿರುವ 17 ಪಂದ್ಯಗಳ ಪೈಕಿ 13ರಲ್ಲಿ ಜಯ ಸಾಧಿಸಿದೆ. 2003ರಿಂದ ಬಾರಬತಿ ಕ್ರೀಡಾಂಗಣದಲ್ಲಿ ಒಂದೂ ಪಂದ್ಯವನ್ನು ಸೋತಿಲ್ಲ. ಆಡಿರುವ ಎಲ್ಲ 7 ಪಂದ್ಯಗಳನ್ನು ಗೆದ್ದುಕೊಂಡಿದೆ.
ಭಾರತ ಬಲಿಷ್ಠ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಲು ಇಂಗ್ಲೆಂಡ್ ತಂಡ ಆಕ್ರಮಣಕಾರಿ ಹಾಗೂ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಸಮತೋಲನ ಸಾಧಿಸುವ ಅಗತ್ಯವಿದೆ.
ಸಂಜೆಯ ವೇಳೆಗೆ ಮಂಜಿನ ಕಾಟ ಇರುವ ಕಾರಣ ಟಾಸ್ ಗೆಲ್ಲುವ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಳ್ಳಲು ಆದ್ಯತೆ ನೀಡಬಹುದು. ಐತಿಹಾಸಿಕವಾಗಿ ಎರಡನೇ ಬ್ಯಾಟಿಂಗ್ ಮಾಡಿದ್ದ ತಂಡವು ಹೆಚ್ಚು ಯಶಸ್ಸು ಕಂಡಿದ್ದು, 19 ಪಂದ್ಯಗಳ ಪೈಕಿ 12ರಲ್ಲಿ ಜಯ ಸಾಧಿಸಿದೆ. ಆದರೆ ಕಟಕ್ನಲ್ಲಿ ಟಾಸ್ ಗೆದ್ದಿರುವ ತಂಡವು ಹೆಚ್ಚು ಲಾಭ ಪಡೆದಿಲ್ಲ. ಅದು 8 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 11ರಲ್ಲಿ ಸೋತಿದೆ.
ಕಟಕ್ನ ಬಾರಬತಿ ಸ್ಟೇಡಿಯಮ್ನ ಏಕದಿನ ಕ್ರಿಕೆಟ್ ಅಂಕಿ-ಅಂಶ
ಆಡಿರುವ ಪಂದ್ಯಗಳು: 19
ಮೊದಲು ಬ್ಯಾಟಿಂಗ್ ಮಾಡಿದ್ದ ತಂಡಕ್ಕೆ 7 ಬಾರಿ ಗೆಲುವು
ಎರಡನೇ ಬ್ಯಾಟಿಂಗ್ ಮಾಡಿರುವ ತಂಡಕ್ಕೆ 12 ಬಾರಿ ಗೆಲುವು
ಮೊದಲ ಇನಿಂಗ್ಸ್ನ ಸರಾಸರಿ ಮೊತ್ತ: 249
ಗರಿಷ್ಠ ಟೀಮ್ ಮೊತ್ತ: 381/6(50), ಭಾರತ-ಇಂಗ್ಲೆಂಡ್(2017)
ಕನಿಷ್ಠ ಟೀಮ್ ಮೊತ್ತ: 148/9(50),ಪಾಕಿಸ್ತಾನ-ಇಂಗ್ಲೆಂಡ್(1989)
ಕೊನೆಯ ಫಲಿತಾಂಶ: ವೆಸ್ಟ್ಇಂಡೀಸ್ ವಿರುದ್ಧ ಭಾರತಕ್ಕೆ 4 ವಿಕೆಟ್ ಜಯ(2019)
►ಪಿಚ್ ರಿಪೋರ್ಟ್
ಕಟಕ್ನ ಬಾರಬತಿ ಸ್ಟೇಡಿಯಮ್ ಗರಿಷ್ಠ ರನ್ ಗಳಿಸಬಹುದಾದ ಮೈದಾನವಲ್ಲ. 1982ರಿಂದ ಆಡಿರುವ ಒಟ್ಟು 38 ಇನಿಂಗ್ಸ್ಗಳ ಪೈಕಿ ಕೇವಲ ಆರು ಇನಿಂಗ್ಸ್ಗಳಲ್ಲಿ 300 ರನ್ ಮಾರ್ಕ್ ಮೀರಿದೆ. ಕಳೆದ 8 ವರ್ಷಗಳಲ್ಲಿ ನಾಲ್ಕು ಬಾರಿ 300ಕ್ಕೂ ಅಧಿಕ ರನ್ ದಾಖಲಾಗಿದೆ. ಇದು ಪಿಚ್ ಬ್ಯಾಟರ್ಗಳ ಸ್ನೇಹಿಯಾಗಿ ಬದಲಾಗುತ್ತಿರುವ ಸೂಚನೆಯಾಗಿದೆ. ಈ ಮೈದಾನದಲ್ಲಿ ಸ್ಪಿನ್ ಬೌಲರ್ಗಳಿಗಿಂತ(88 ವಿಕೆಟ್ಗಳು)ವೇಗದ ಬೌಲರ್ಗಳು ಹೆಚ್ಚು ವಿಕೆಟ್ಗಳನ್ನು(137)ಪಡೆದಿದ್ದಾರೆ.
►ತಂಡಗಳು
ಭಾರತ(ಸಂಭಾವ್ಯ): ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆ.ಎಲ್.ರಾಹುಲ್(ವಿಕೆಟ್ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮುಹಮ್ಮದ್ ಶಮಿ.
ಇಂಗ್ಲೆಂಡ್(ಸಂಭಾವ್ಯ): ಬೆನ್ ಡಕೆಟ್, ಫಿಲ್ ಸಾಲ್ಟ್(ವಿಕೆಟ್ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್(ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜೇಕಬ್ ಬೆಥೆಲ್, ಬ್ರೆಂಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
ಪಂದ್ಯ ಆರಂಭ ಸಮಯ: ಮಧ್ಯಾಹ್ನ 1:30