Fact Check: ‘ಮತದಾನ ಪ್ರಮಾಣ’ಹೆಚ್ಚಿಸಲು ಅಮೆರಿಕ 21 ಮಿಲಿಯನ್ ಡಾಲರ್ ನೀಡಿದ್ದು ಭಾರತಕ್ಕಲ್ಲ, ಬಾಂಗ್ಲಾದೇಶಕ್ಕೆ!

ಡೊನಾಲ್ಡ್ ಟ್ರಂಪ್ | PTI
ಹೊಸದಿಲ್ಲಿ: ಟ್ರಂಪ್ ಆಡಳಿತದಲ್ಲಿ ಎಲಾನ್ ಮಸ್ಕ್ ನೇತೃತ್ವದ ಸರಕಾರಿ ಕಾರ್ಯದಕ್ಷತೆ ಇಲಾಖೆ (DOGE) ಫೆ.16ರಂದು ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು 21 ಮಿಲಿಯ ಡಾಲರ್ ನಿಧಿಯ ರದ್ದತಿ ಸೇರಿದಂತೆ ಸರಣಿ ವೆಚ್ಚ ಕಡಿತಗಳನ್ನು ಪ್ರಕಟಿಸಿದ ಬಳಿಕ ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸ್ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಪ್ರಭಾವವನ್ನು ಬಳಸುತ್ತಿದೆ ಎಂದು ಆರೋಪಿಸಿದೆ.
ಬುಧವಾರ ಮಿಯಾಮಿಯಲ್ಲಿ ಮಾಡಿದ್ದ ಭಾಷಣದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ,‘ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ನಾವೇಕೆ 21 ಮಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡಬೇಕು? ವಾವ್, 21 ಮಿಲಿಯ ಡಾಲರ್! ಅವರು(ಹಿಂದಿನ ಬೈಡೆನ್ ಆಡಳಿತ) ಬೇರೆ ಯಾರನ್ನೋ ಚುನಾಯಿಸಲು ಪ್ರಯತ್ನಿಸುತ್ತಿದ್ದರು ಎಂದು ನಾನು ಭಾವಿಸಿದ್ದೇನೆ‘ ಎಂದು ಹೇಳಿದ್ದರು.
ಆದರೆ ವಾಸ್ತವಾಂಶ ಬೇರೆಯೇ ಆಗಿದೆ. ಸುದ್ದಿಸಂಸ್ಥೆಗೆ ಲಭ್ಯವಾಗಿರುವ ದಾಖಲೆಗಳು 2022ರಲ್ಲಿ 21 ಮಿಲಿಯ ಡಾಲರ್ ಹಣವನ್ನು ಬಾಂಗ್ಲಾದೇಶಕ್ಕೆ ಮಂಜೂರು ಮಾಡಲಾಗಿತ್ತೇ ಹೊರತು ಭಾರತಕ್ಕಲ್ಲ ಎನ್ನುವುದನ್ನು ತೋರಿಸಿವೆ ಎಂದು indianexpress.com ವರದಿ ಮಾಡಿದೆ.
ಈ ಪೈಕಿ 13.4 ಮಿಲಿಯ ಡಾಲರ್ ಗಳನ್ನು ಈಗಾಗಲೇ ಜನವರಿ 2024ರ ಚುನಾವಣೆಗಳಿಗೆ ಮುನ್ನ ಅಂದರೆ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾರ ಪದಚ್ಯುತಿಗೆ ಏಳು ತಿಂಗಳು ಮೊದಲು ದೇಶದ ವಿದ್ಯಾರ್ಥಿಗಳನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ತೊಡಗಿಕೊಳ್ಳಲು ಹಾಗೂ ಈ ಚುನಾವಣೆಗಳ ಸಮಗ್ರತೆಯನ್ನು ಪ್ರಶ್ನಿಸುವ ಯೋಜನೆಗಳಿಗಾಗಿ ಬಳಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
DOGE ಪಟ್ಟಿಯಲ್ಲಿರುವ ಎರಡು USAID ಅನುದಾನಗಳು ವಿವಾದದ ಕೇಂದ್ರಬಿಂದುವಾಗಿವೆ; ಈ ಅನುದಾನಗಳನ್ನು ‘ಸಂಕೀರ್ಣ ಪ್ರಜಾಪ್ರಭುತ್ವ,ಹಕ್ಕುಗಳು ಮತ್ತು ಆಡಳಿತ ಕಾರ್ಯಕ್ರಮಗಳಲ್ಲಿ’ ಪರಿಣತಿ ಹೊಂದಿರುವ ವಾಷಿಂಗ್ಟನ್ ಡಿಸಿ ಮೂಲದ ಗುಂಪು ‘ಕನ್ಸಾರ್ಟಿಯಂ ಫಾರ್ ಇಲೆಕ್ಷನ್ಸ್ ಆ್ಯಂಡ್ ಪಾಲಿಟಿಕಲ್ ಪ್ರಾಸೆಸ್ ಸ್ಟ್ರೆಂಗ್ದನಿಂಗ್(ಸಿಇಪಿಪಿಎಸ್) ಮೂಲಕ ರವಾನಿಸಲಾಗಿತ್ತು.
ಸಿಇಪಿಪಿಎಸ್ USAIDನಿಂದ ಒಟ್ಟು 486 ಮಿಲಿಯನ್ ಡಾಲರ್ ಗಳನ್ನು ಪಡೆಯಬೇಕಿತ್ತು. DOGE ಪ್ರಕಾರ ಇದರಲ್ಲಿ ಮಾಲ್ಡೋವಾದಲ್ಲಿ ‘ಪ್ರಜೆಗಳು ಒಳಗೊಂಡಿರುವ ಮತ್ತು ಭಾಗವಹಿಸುವ ರಾಜಕೀಯ ಪ್ರಕ್ರಿಯೆ’ಗಾಗಿ 22 ಮಿಲಿಯನ್ ಡಾಲರ್ ಮತ್ತು ‘ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು’ 21 ಮಿಲಿಯನ್ ಡಾಲರ್ ಗಳು ಸೇರಿದ್ದವು.
ಮಾಲ್ಡೋವಾಕ್ಕಾಗಿ ಮೊದಲ ಅನುದಾನವನ್ನು ಸಿಇಪಿಪಿಎಸ್ಗೆ ಸೆ.2016ರಲ್ಲಿ ಹಸ್ತಾಂತರಿಸಲಾಗಿತ್ತು. ನಿಧಿಯು ಜುಲೈ 2026ರವರೆಗೆ ಚಾಲ್ತಿಯಲ್ಲಿದ್ದು,ಈವರೆಗೆ 13.2 ಮಿಲಿಯನ್ ಡಾಲರ್ ಗಳನ್ನು ವಿತರಿಸಲಾಗಿದೆ.
ಆದರೆ DOGE ಬೆಟ್ಟು ಮಾಡಿರುವ 21 ಮಿಲಿಯನ್ ಡಾಲರ್ ಅನುದಾನವು ಬಾಂಗ್ಲಾದೇಶಕ್ಕಾಗಿ ಆಗಿತ್ತು. ಇಲ್ಲಿ ಇವುಗಳನ್ನು ಪರಿಗಣಿಸಬೇಕು;
►ಪ್ರತಿಯೊಂದೂ ಫೆಡರಲ್ ಅನುದಾನವು ಅದನ್ನು ವ್ಯಯಿಸಬೇಕಾದ ನಿರ್ದಿಷ್ಟ ದೇಶದ ಉಲ್ಲೇಖವನ್ನು ಹೊಂದಿರುತ್ತದೆ. ಯುಎಸ್ ಫೆಡರಲ್ ವೆಚ್ಚಗಳ ಅಧಿಕೃತ ಮುಕ್ತ ದತ್ತಾಂಶ ಮೂಲದ ಪ್ರಕಾರ ಭಾರತದಲ್ಲಿ 2008ರಿಂದ USAID ಅನುದಾನಿತ ಯಾವುದೇ ಸಿಇಪಿಪಿಎಸ್ ಯೋಜನೆ ಇಲ್ಲ.
► 21 ಮಿಲಿಯನ್ ಡಾಲರ್ ಮೌಲ್ಯದ ಮತ್ತು ಮತದಾನದ ಉದ್ದೇಶಕ್ಕೆ ಹೊಂದಿಕೆಯಾಗುವ ಏಕೈಕ USAID ಅನುದಾನವನ್ನು ಜುಲೈ 2022ರಲ್ಲಿ ‘ಅಮಾರ್ ವೋಟ್ ಅಮಾರ್(ನನ್ನ ಮತ ನನ್ನದು)’ಗಾಗಿ ಸಿಇಪಿಪಿಸಿಗೆ ಮಂಜೂರು ಮಾಡಲಾಗಿತ್ತು. ಇದು ಬಾಂಗ್ಲಾದೇಶದಲ್ಲಿಯ ಯೋಜನೆಯಾಗಿದೆ.
► ನವಂಬರ್ 2022ರಲ್ಲಿ ಈ ಅನುದಾನದ ಉದ್ದೇಶವನ್ನು ‘ USAIDನ ನಾಗೊರಿಕ್(ಪ್ರಜೆ) ಕಾರ್ಯಕ್ರಮ’ ಎಂದು ಮಾರ್ಪಡಿಸಲಾಗಿತ್ತು. ಢಾಕಾದಲ್ಲಿಯ USAID ರಾಜಕೀಯ ಪ್ರಕ್ರಿಯೆಗಳ ಸಲಹೆಗಾರರೋರ್ವರು ಡಿಸೆಂಬರ್ 2024ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ‘ USAID ಅನುದಾನಿತ 21 ಮಿಲಿಯನ್ ಡಾಲರ್ ಗಳ ಸಿಇಪಿಪಿಎಸ್/ನಾಗೊರಿಕ್ ಯೋಜನೆಯನ್ನು ನಾನು ನಿರ್ವಹಿಸುತ್ತೇನೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ನ ಮೂಲಕ ದೃಢಪಡಿಸಿದ್ದರು.
ಜುಲೈ 2025ರವರೆಗೆ ಮೂರು ವರ್ಷಗಳ ಚಾಲ್ತಿಯಲ್ಲಿರಿಸಲು ಉದ್ದೇಶಿಸಲಾಗಿರುವ ಈ ಅನುದಾನದ ಪೈಕಿ 13.2 ಮಿಲಿಯನ್ ಡಾಲರ್ ಗಳನ್ನು ಈಗಾಗಲೇ ಬಳಸಲಾಗಿದೆ ಎನ್ನುವುದನ್ನು ದಾಖಲೆಗಳು ತೋರಿಸಿವೆ.