ದಿಲ್ಲಿಗೆ ಪ್ರತಿಭಟನಾ ಮೆರವಣಿಗೆ ತೆರಳಲು ಯತ್ನಿಸಿದ ರೈತರ ಮೇಲೆ ಮತ್ತೊಮ್ಮೆ ಅಶ್ರುವಾಯು ಪ್ರಯೋಗ
Photo: PTI
ಚಂಡೀಗಢ/ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಗೆ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಪುನಾರಂಭಿಸಲು ಯತ್ನಿಸಿದ ರೈತರ ಮೇಲೆ ಹರ್ಯಾಣದ ಅಂಬಾಲಾದಲ್ಲಿನ ಶಂಭು ಗಡಿಯ ಬಳಿ ಬುಧವಾರ ಭದ್ರತಾ ಸಿಬ್ಬಂದಿಗಳು ಮತ್ತೊಮ್ಮೆ ಅಶ್ರುವಾಯು ಶೆಲ್ ಪ್ರಯೋಗಿಸಿದ್ದಾರೆ.
ಇದಕ್ಕೂ ಮುನ್ನ, ಮಂಗಳವಾರ ಉಭಯ ರಾಜ್ಯಗಳ ಎರಡು ಗಡಿಗಳ ಬಳಿ ಪ್ರತಿಭಟನಾನಿರತ ರೈತರು ಹಾಗೂ ಹರ್ಯಾಣ ಪೊಲೀಸರು ನಡುವೆ ಸಂಘರ್ಷವೇರ್ಪಟ್ಟಿತು. ಪ್ರತಿಭಟನಾಕಾರರು ತಡೆಗೋಡೆಗಳನ್ನು ಮುರಿಯಲು ಯತ್ನಿಸಿದಾಗ ಹರ್ಯಾಣ ಪೊಲೀಸರು ಅವರ ಮೇಲೆ ಅಶ್ರುವಾಯು ಶೆಲ್ ಹಾಗೂ ಜಲಫಿರಂಗಿಯನ್ನು ಪ್ರಯೋಗಿಸಿದರು. ಹರ್ಯಾಣದ ಜಿಂದ್ ಜಿಲ್ಲೆಯ ಬಳಿಯಿರುವ ಗಡಿಯಲ್ಲಿಯೂ ಪ್ರತಿಭಟನಾಕಾರರ ಮೇಲೆ ಹರ್ಯಾಣ ಪೊಲೀಸರು ಅಶ್ರುವಾಯು ಶೆಲ್ ಹಾಗೂ ಜಲಫಿರಂಗಿಗಳನ್ನು ಪ್ರಯೋಗಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರವಣ್ ಸಿಂಗ್ ಪಂಢರ್, ನಾವು ಬುಧವಾರ ಮತ್ತೆ ಮರಳಲಿದ್ದು, ಶಂಭು ಗಡಿಯ ಬಳಿ ಸುಮಾರು 10,000 ಪ್ರತಿಭಟನಾಕಾರರೊಂದಿಗೆ ಮುನ್ನುಗ್ಗಲು ಯತ್ನಿಸುತ್ತೇವೆ ಎಂದು ಹೇಳಿದರು.
ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಸೇರಿದಂತೆ ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಹಮ್ಮಿಕೊಳ್ಳಲಾಗಿರುವ ದಿಲ್ಲಿ ಚಲೊ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳು ಮುಂದಾಗಿವೆ.