ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ತೊಂದರೆ; ರಷ್ಯಾದಲ್ಲಿ ತುರ್ತು ಭೂಸ್ಪರ್ಷ
ಹೊಸದಿಲ್ಲಿ: ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಬೆನ್ನಲ್ಲೇ ವಿಮಾನವನ್ನು ರಷ್ಯಾಗೆ ತಿರುಗಿಸಲಾಗಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 225 ಮಂದಿ ಸುರಕ್ಷಿತವಾಗಿದ್ದಾರೆ ಹಾಗೂ ಅವರಿಗೆ ಎಲ್ಲ ಅಗತ್ಯ ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಎಐ 183 ವಿಮಾನವನ್ನು ಮುಂಜಾಗ್ರತಾ ಕ್ರಮವಾಗಿ ರಷ್ಯಾದ ಕ್ರಸ್ನೊಯಾಸ್ಕ್ ಕ್ರಾಯ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ಸರಕು ದಾಸ್ತಾನು ಪ್ರದೇಶದಲ್ಲಿ ಸಂಭಾವ್ಯ ಸಮಸ್ಯೆಯನ್ನು ಕಾಕ್ಪಿಟ್ ಸಿಬ್ಬಂದಿ ಪತ್ತೆ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಏರ್ ಇಂಡಿಯಾ ವಿವರ ನೀಡಿದೆ.
ಈ ವಿಮಾನದಲ್ಲಿ 225 ಮಂದಿ ಪ್ರಯಾಣಿಕರು ಮತ್ತು 19 ಮಂದಿ ಸಿಬ್ಬಂದಿ ಇದ್ದರು, ಇವರೆಲ್ಲರನ್ನು ಮುಂದಿನ ಪ್ರಕ್ರಿಯೆಗಾಗಿ ಅಂತರಾಷ್ಟ್ರೀಯ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ಹೇಳಿವೆ.
ಕ್ರಸ್ನೊಯಾಸ್ಕ್ ಕ್ರಾಯ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಿಬ್ಬಂದಿ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲು ಬೇರೆ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.