ಅತ್ಯಂತ ತೀವ್ರ ಚಂಡಮಾರುತವಾಗಿ ರೂಪಾಂತರಗೊಂಡ ‘ತೇಜ್’
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಅರಬಿ ಸಮುದ್ರದ ಮೇಲೆ ಸೃಷ್ಟಿಯಾಗಿರುವ ತೀವ್ರ ಚಂಡಮಾರುತ ‘ತೇಜ್’ ರವಿವಾರ ಅತ್ಯಂತ ತೀವ್ರ ಚಂಡಮಾರುತವಾಗಿ ರೂಪಾಂತರಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ತಿಳಿಸಿದೆ. ಇದು ಈ ವರ್ಷ ಅರಬಿ ಸಮುದ್ರದಲ್ಲಿ ಉಂಟಾಗಿರುವ ಎರಡನೇ ಚಂಡಮಾರುತವಾಗಿದೆ.
ಚಂಡಮಾರುತವು ಅ.25ರಂದು ನಸುಕಿನಲ್ಲಿ ಘೈದಾ (ಯೆಮೆನ್) ಮತ್ತು ಸಲಾಲಾ (ಒಮನ್) ನಡುವೆ ದಾಟುವ ಸಾಧ್ಯತೆಯಿದೆ. ಐದು ವರ್ಷಗಳ ಹಿಂದೆ 2018ರಲ್ಲಿ ‘ಮೆಕುನು ’ಈ ಪ್ರದೇಶದಲ್ಲಿ ಅಪ್ಪಳಿಸಿದ್ದ ಕೊನೆಯ ಚಂಡಮಾರುತವಾಗಿತ್ತು.
ಆದರೂ ಜೂನ್ ನಲ್ಲಿ ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದ ‘ಬಿಪರಜಾಯ್’ ಚಂಡಮಾರುತದಂತೆ ಕೆಲವೊಮ್ಮೆ ಚಂಡಮಾರುತಗಳು ನಿರೀಕ್ಷಿತ ದಿಕ್ಕು ಮತ್ತು ತೀವ್ರತೆಯನ್ನು ಬದಲಿಸಬಹುದು ಎಂದು ಹವಾಮಾನ ಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಬಿಪರಜಾಯ್ ಚಂಡಮಾರುತವು ಆರಂಭದಲ್ಲಿ ಪಶ್ಚಿಮ-ವಾಯುವ್ಯದತ್ತ ಚಲಿಸಿತ್ತಾದರೂ ನಂತರ ದಿಕ್ಕನ್ನು ಬದಲಿಸಿ ಗುಜರಾತಿನ ಮಾಂಡ್ವಿ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಅಪ್ಪಳಿಸಿತ್ತು.
ಐಎಂಡಿ ಪ್ರಕಾರ ಅತ್ಯಂತ ತೀವ್ರ ಚಂಡಮಾರುತವಾಗಿ ರೂಪಾಂತರಗೊಂಡಿರುವ ‘ತೇಜ್’ ಸೊಕೊತ್ರಾ (ಯೆಮೆನ್)ದ ಪೂರ್ವ-ಆಗ್ನೇಯಕ್ಕೆ ಸುಮಾರು 160 ಕಿ.ಮೀ.,ಸಲಾಲಾ (ಒಮನ್)ದ ದಕ್ಷಿಣ-ಆಗ್ನೇಯಕ್ಕೆ 540 ಕಿ.ಮೀ. ಮತ್ತು ಅಲ್ ಘೈದಾ (ಯೆಮೆನ್)ದ ಆಗ್ನೇಯಕ್ಕೆ 550 ಕಿ.ಮೀ.ದೂರದಲ್ಲಿ ಸ್ಥಿತಗೊಂಡಿದೆ. ಅದು ವಾಯುವ್ಯದತ್ತ ಚಲಿಸುವ ಮತ್ತು ರವಿವಾರ ಮಧ್ಯಾಹ್ನದ ಸುಮಾರಿಗೆ ಅಲ್ ಘೈದಾ ಮತ್ತು ಸಲಾಲಾ ನಡುವೆ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.