ಬಿಹಾರಿಗಳು ಶೌಚಾಲಯ ಸ್ವಚ್ಛಗೊಳಿಸುತ್ತಾರೆ ಎಂಬ ಡಿಎಂಕೆ ಸಂಸದರ ಹೇಳಿಕೆಗೆ ತಿರುಗೇಟು ನೀಡಿದ ತೇಜಸ್ವಿ ಯಾದವ್
ವೈರಲಾಗಿದ್ದ ದಯಾನಿಧಿ ಮಾರನ್ ಅವರ ಹಳೇ ವೀಡಿಯೊ
Photo : PTI
ಪಾಟ್ನಾ: ಬಿಹಾರಿಗಳು ಶೌಚಾಲಯ ಸ್ವಚ್ಛಗೊಳಿಸುತ್ತಾರೆ ಎಂಬ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರ ಹೇಳಿಕೆಯನ್ನು ಖಂಡಿಸಿರುವ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, “ಇದು ಖಂಡನಾರ್ಹ ಹೇಳಿಕೆಯಾಗಿದೆ. ದೇಶದ ಯಾವುದೇ ರಾಜ್ಯದ ನಾಯಕರು ಇಂತಹ ಹೇಳಿಕೆ ನೀಡುವುದರಿಂದ ದೂರ ಉಳಿಯಬೇಕಿದೆ. ಈ ದೇಶವು ಒಂದೇ ಆಗಿದೆ. ನಾವು ಇತರ ರಾಜ್ಯಗಳ ಜನರನ್ನು ಗೌರವಿಸುತ್ತೇವೆ ಹಾಗೂ ಇತರರಿಂದಲೂ ಅದೇ ಗೌರವವನ್ನು ನಿರೀಕ್ಷಿಸುತ್ತೇವೆ. ಇಂತಹ ಹೇಳಿಕೆಗಳನ್ನು ನೀಡಬಾರದು” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
“ಇಂಗ್ಲಿಷ್ ಕಲಿಯುವವರು ಐಟಿ ಉದ್ಯೋಗಗಳನ್ನು ಪಡೆಯುತ್ತಿದ್ದರೆ, ಹಿಂದಿ ಕಲಿಯುವವರು ನಿರ್ಮಾಣ ಕಾಮಗಾರಿ, ರಸ್ತೆ ಅಥವಾ ಶೌಚಾಲಯಗಳನ್ನು ಶುಚಿಗೊಳಿಸುವ ಕೆಲಸ ಮಾಡುತ್ತಾರೆ” ಎಂದು ದಯಾನಿಧಿ ಮಾರನ್ ಹೇಳುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಹೇಳಿಕೆಯನ್ನು ಬಿಜೆಪಿ ಸೇರಿದಂತೆ ಹಲವಾರು ಪಕ್ಷಗಳು ಖಂಡಿಸಿದ್ದವು.
ಆದರೆ, ಈ ವಿಡಿಯೊ ಹಳೆಯದು ಎಂದು ಸ್ಪಷ್ಟೀಕರಣ ನೀಡಿರುವ ಡಿಎಂಕೆ, ಪ್ರವಾಹ ಪರಿಹಾರ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲೆ ತಮಿಳುನಾಡು ಸರ್ಕಾರವು ಒತ್ತಡ ಹೇರುತ್ತಿರುವುದರಿಂದ, ಈ ವಿಷಯವನ್ನು ಜನರಿಂದ ಬದಿಗೆ ಸರಿಸಲು ಬಿಜೆಪಿಯು ಹಳೆಯ ವಿಡಿಯೊವನ್ನು ಮರು ಹಂಚಿಕೆ ಮಾಡುತ್ತಿದೆ ಎಂದು ಆರೋಪಿಸಿದೆ.
ಹಿಂದಿ ಹೇರಿಕೆ ತಮಿಳುನಾಡಿನಲ್ಲಿ ಭಾವನಾತ್ಮಕ ವಿಷಯವಾಗಿದ್ದು, ಈ ಚಳವಳಿಯಲ್ಲಿ ಡಿಎಂಕೆ ಮಂಚೂಣಿಯಲ್ಲಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅದು ಆರೋಪಿಸುತ್ತಲೇ ಬರುತ್ತಿದೆ.
INDIA ಮೈತ್ರಿಕೂಟದ ಅಂಗಪಕ್ಷವಾದ ಲಾಲೂ ಪ್ರಸಾದ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಕೂಡಾ ದಯಾನಿಧಿ ಮಾರನ್ ಹೇಳಿಕೆಯನ್ನು ಖಂಡಿಸಿದೆ.