ತೆಲಂಗಾಣ | ಮಗ ಸತ್ತಿರುವುದು ಗೊತ್ತಿಲ್ಲದೇ ಶವದ ಜೊತೆ ನಾಲ್ಕು ದಿನ ಕಳೆದ ಅಂಧ ಹೆತ್ತವರು!
PC : timesofindia.indiatimes.com
ಹೈದರಾಬಾದ್ : ನಾಲ್ಕು ದಿನಗಳ ಹಿಂದೆಯೇ ತಮ್ಮ 30ರ ಹರೆಯದ ಮಗ ಸತ್ತಿದ್ದರೂ ಅದು ಗೊತ್ತಿಲ್ಲದೇ ಅಂಧ ವೃದ್ಧ ದಂಪತಿ ಶವದೊಂದಿಗೆ ನಾಲ್ಕು ದಿನಗಳನ್ನು ಕಳೆದ ಹೃದಯ ವಿದ್ರಾವಕ ಘಟನೆ ಇಲ್ಲಿ ವರದಿಯಾಗಿದೆ.
ದಂಪತಿಯ ಮನೆಯಿಂದ ಸೋಮವಾರ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ನೆರೆಕರೆಯ ಕೆಲವರು ಪೋಲಿಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೋಲಿಸರಿಗೆ ಕೊಳೆತ ಸ್ಥಿತಿಯಲ್ಲಿದ್ದ ಯುವಕನೋರ್ವನ ಶವ ಮತ್ತು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವೃದ್ಧ ದಂಪತಿ ಕಣ್ಣಿಗೆ ಬಿದ್ದಿದ್ದರು.
ಪ್ರಾಥಮಿಕ ತನಿಖೆಯನ್ನು ನಡೆಸಿದ ಪೋಲಿಸರು, ದಂಪತಿಯ ಪುತ್ರ ನಾಲ್ಕೈದು ದಿನಗಳ ಹಿಂದೆಯೇ ನಿದ್ರೆಯಲ್ಲಿ ಸಾವನ್ನಪ್ಪಿರುವ ಶಂಕೆಯಿದೆ ಎಂದು ಹೇಳಿದ್ದಾರೆ.
ದಂಪತಿ 60ಕ್ಕೂ ಹೆಚ್ಚಿನ ಪ್ರಾಯದವರಾಗಿದ್ದು, ಕಣ್ಣು ಕಾಣಿಸದ ಅವರಿಗೆ ತಮ್ಮ ಕಿರಿಯ ಮಗ ಮೃತಪಟ್ಟಿದ್ದಾನೆ ಎನ್ನುವುದು ಗೊತ್ತಾಗಿರಲಿಲ್ಲ. ಆಹಾರ ಮತ್ತು ನೀರಿಗಾಗಿ ದಂಪತಿ ಮಗನನ್ನು ಕರೆಯುವ ಪ್ರಯತ್ನಗಳನ್ನು ಮಾಡುತ್ತಿದ್ದರೂ ಆತನಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಅವರ ಕ್ಷೀಣಧ್ವನಿಯು ನೆರೆಹೊರೆಯವರಿಗೂ ಕೇಳಿಸಿರಲಿಲ್ಲ ಎಂದು ಪೋಲಿಸರು ತಿಳಿಸಿದರು.
ವೃದ್ಧದಂಪತಿಗೆ ಆಹಾರ ಮತ್ತು ನೀರನ್ನು ಒದಗಿಸಿದ ಬಳಿಕ ಅವರ ಹಿರಿಯ ಮಗ ನಗರದಲ್ಲಿಯ ಬೇರೊಂದು ಪ್ರದೇಶದಲ್ಲಿ ವಾಸವಾಗಿರುವ ಮಾಹಿತಿ ಲಭಿಸಿದ ಬಳಿಕ ಆತನನ್ನು ಕರೆಸಿ ಹೆತ್ತವರನ್ನು ಜೊತೆಗೆ ಕಳುಹಿಸಿದ್ದಾರೆ.
ಈ ಬಗ್ಗೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.