ತೆಲಂಗಾಣದಲ್ಲಿ ಸುರಂಗ ಕುಸಿತ: ಒಬ್ಬ ಕಾರ್ಮಿಕನ ಮೃತದೇಹ ಪತ್ತೆ ಹಚ್ಚಿದ ರಕ್ಷಣಾ ತಂಡ

Photo Credit: PTI
ಹೈದರಾಬಾದ್ : ನಾಗರ್ಕರ್ನೂಲ್ ಜಿಲ್ಲೆಯ ದೋಮಲಪೆಂಟಾ ಗ್ರಾಮದ ಬಳಿಯ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದೊಳಗಿನ ಅವಶೇಷಗಳ ಅಡಿಯಲ್ಲಿ ಸಿಲುಕಿ ಎಂಟು ಜನರು ನಾಪತ್ತೆಯಾಗಿ 15 ದಿನಗಳ ನಂತರ, ರಕ್ಷಣಾ ತಂಡಗಳು ರವಿವಾರ ಸಂಜೆ ಒಬ್ಬ ವ್ಯಕ್ತಿಯ ಮೃತದೇಹವನ್ನು ಪತ್ತೆಹಚ್ಚಿವೆ.
ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳ ಪ್ರಕಾರ, ಅವಶೇಷಗಳ ಅಡಿಯಲ್ಲಿ ಮೃತದೇಹವು ಪತ್ತೆಯಾಗಿದ್ದು, ವೈದ್ಯಕೀಯ ಮತ್ತು ಕಾನೂನು ಕ್ರಮಗಳಿಗಾಗಿ ಆಸ್ಪತ್ರೆಗೆ ಸಾಗಿಸಲು ಸುರಂಗದಿಂದ ಹೊರತರಲಾಗುತ್ತಿದೆ. ಕೇರಳದ ಶವಗುರುತಿಸುವ ಸ್ನಿಫರ್ ಶ್ವಾನ ದಳ ಗುರುತಿಸಿದ ಬಿಂದುವಿನ ಆಧಾರದ ಮೇಲೆ ಉತ್ತರಾಖಂಡದ ರ್ಯಾಟ್
ಹೋಲ್ ಮೈನರ್ಸ್ ಮತ್ತು ಸಿಂಗರೇಣಿ ಕೊಲಿಯರೀಸ್ನ ಮೈನರ್ಸ್ ಮೃತದೇಹವನ್ನು ಹೊರತೆಗೆದರು.
ಸ್ನಿಫರ್ ಶ್ವಾನ ದಳ ಗುರುತಿಸಿದ ಮತ್ತೊಂದು ಪ್ರದೇಶದಲ್ಲೂ ರಕ್ಷಣಾ ತಂಡಗಳು ಅಗೆಯುವ ಕಾರ್ಯದಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಭೂಭೌತಿಕ ಸಂಶೋಧನಾ ಸಂಸ್ಥೆ (NGRI), ಸ್ನಿಫರ್ ಶ್ವಾನದಳಗಳು ಮತ್ತು ಭೂ ತನಿಖಾ ರಾಡಾರ್ (GPR) ಸ್ಕ್ಯಾನಿಂಗ್ ಮಾಹಿತಿಯ ಆಧಾರದ ಮೇಲೆ ಶೀಘ್ರದಲ್ಲೇ ಹೆಚ್ಚಿನ ಮೃತದೇಹಗಳನ್ನು ಪತ್ತೆಹಚ್ಚುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.