ತೆಲಂಗಾಣ: ಮರ್ಯಾದೆ ಹತ್ಯೆ ಪ್ರಕರಣ ಒರ್ವನಿಗೆ ಮರಣದಂಡನೆ; ಇತರ 6 ಮಂದಿಗೆ ಜೀವಾವಧಿ

ಸಾಂದರ್ಭಿಕ ಚಿತ್ರ | PC : freepik.com
ಹೈದರಾಬಾದ್: 2018ರ ದಲಿತ ಯುವಕನ ಮರ್ಯಾದೆ ಹತ್ಯೆ ಪ್ರಕರಣದ ಓರ್ವ ಆರೋಪಿಗೆ ತೆಲಂಗಾಣದ ನಲಗೊಂಡ ಜಿಲ್ಲೆಯ ನ್ಯಾಯಾಲಯ ಸೋಮವಾರ ಮರಣದಂಡನೆ ವಿಧಿಸಿದೆ
ನ್ಯಾಯಾಲಯ ಸುಭಾಷ್ ಕುಮಾರ್ ಶರ್ಮಾಗೆ ಮರಣದಂಡನೆ ವಿಧಿಸಿದೆ. ಇತರ 6 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಲಗೊಂಡ ಜಿಲ್ಲೆಯಲ್ಲಿ ಪ್ರಬಲ ಜಾತಿಯ ಯುವತಿಯನ್ನು 2018 ಸೆಪ್ಟಂಬರ್ನಲ್ಲಿ ವಿವಾಹವಾಗಿದ್ದ ಪ್ರಣಯ್ ಕುಮಾರ್(23)ನ ಹತ್ಯೆಗೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
1 ಕೋ.ರೂ. ಸುಪಾರಿ ಹತ್ಯೆ ಪ್ರಕರಣ ಎಂದು ಹೇಳಲಾದ ಈ ಪ್ರಕರಣದಲ್ಲಿ ಯುವತಿಯ ತಂದೆ ಮಾರುತಿ ರಾವ್ ಹಾಗೂ ಚಿಕ್ಕಪ್ಪ ಸೇರಿದಂತೆ 8 ಮಂದಿ ಆರೋಪಿಗಳನ್ನು 2018 ಸೆಪ್ಟಂಬರ್ 18ರಂದು ಬಂಧಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಬಂಧಿತರಲ್ಲಿ ಗುಜರಾತ್ನ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡ ಇಬ್ಬರು ವ್ಯಕ್ತಿಗಳು ಕೂಡ ಸೇರಿದ್ದರು.
ತನ್ನ ಪತಿ ಪ್ರಣಯ್ ಕುಮಾರ್ನ ಹತ್ಯೆ ಹಿಂದೆ ತಂದೆ ಮಾರುತಿ ರಾವ್ ಅವರ ಕೈವಾಡ ಇದೆ ಎಂದು ಯುವತಿ ಆರೋಪಿಸಿದ್ದರು.
ತನ್ನ ಪುತ್ರಿ ಪ್ರಣಯ್ ರಾಯ್ನನ್ನು ವಿವಾಹವಾಗುವುದನ್ನು ಮಾರುತಿ ರಾವ್ ವಿರೋಧಿಸಿದ್ದರು. ಅವರು ತನ್ನ ಅಳಿಯನನ್ನು ಹತ್ಯೆಗೈಯಲು ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದರು. ಅವರು ಗುತ್ತಿಗೆ ಕೊಲೆಗಾರರಿಗೆ 15 ಲಕ್ಷ ರೂ. ಮುಂಗಡವನ್ನು ಕೂಡ ಪಾವತಿಸಿದ್ದರು ಎಂದು ಹೇಳಲಾಗಿದೆ.
ಮಾರುತಿ ರಾವ್ ಅವರು 2020ರಲ್ಲಿ ಇಲ್ಲಿನ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.