ಬಿಜೆಪಿ ಆಡಳಿತದ ರಾಜ್ಯಗಳು ಮೊದಲ ವರ್ಷವೇ 55,000 ಉದ್ಯೋಗಗಳನ್ನು ಒದಗಿಸಿರುವ ಸಾಕ್ಷಿ ಕೊಡಿ : ಪ್ರಧಾನಿ ಮೋದಿಗೆ ತೆಲಂಗಾಣ ಸಿಎಂ ಸವಾಲು
ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ | PC : PTI
ಹೈದರಾಬಾದ್: ಬಿಜೆಪಿ ಆಡಳಿತಾರೂಢ ರಾಜ್ಯಗಳು ಅಧಿಕಾರಕ್ಕೆ ಬಂದ ಮೊದಲ ವರ್ಷವೇ 55,000 ಉದ್ಯೋಗಗಳನ್ನು ಒದಗಿಸಿರುವುದನ್ನು ಸಾಬೀತು ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ಒಂದು ವೇಳೆ ಸಾಬೀತು ಪಡಿಸಿದರೆ ನಾನು ದಿಲ್ಲಿಯಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದೂ ಘೋಷಿಸಿದರು.
ನಲಗೊಂಡದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜನರ ತೀರ್ಪನ್ನು ಧಿಕ್ಕರಿಸಿ, ಸದನಕ್ಕೆ ಏಕೆ ಹಾಜರಾಗುತ್ತಿಲ್ಲ ಎಂದು ಭಾರತ್ ರಾಷ್ಟ್ರ ಸಮಿತಿಯ ಮುಖ್ಯಸ್ಥ ಹಾಗೂ ವಿರೋಧ ಪಕ್ಷದ ನಾಯಕ ಕೆ.ಚಂದ್ರಶೇಖರ್ ರಾವ್ ರನ್ನೂ ಟೀಕಿಸಿದರು.
“ನಾನು ನೇರವಾಗಿ ಮೋದಿಯನ್ನು ಪ್ರಶ್ನಿಸುತ್ತಿದ್ದೇನೆ. ನೀವು 14 ವರ್ಷ ಗುಜರಾತ್ ಮುಖ್ಯಮಂತ್ರಿ ಹಾಗೂ 11 ವರ್ಷಗಳ ಕಾಲ ಪ್ರಧಾನಿಯಾಗಿದ್ದೀರಿ. ಬಿಜೆಪಿ ಆಡಳಿತದಲ್ಲಿರುವ ಗುಜರಾತ್, ಮಧ್ಯಪ್ರದೇಶ, ಛತ್ತೀಸ್ ಗಢ ಅಥವಾ ರಾಜಸ್ಥಾನ ಸೇರಿದಂತೆ ಯಾವುದೇ ರಾಜ್ಯದಲ್ಲಾದರೂ ತಾನು ಅಧಿಕಾರಕ್ಕೆ ಬಂದ ಮೊದಲ ವರ್ಷವೇ 55,000 ಉದ್ಯೋಗಗಳನ್ನು ಒದಗಿಸಿದ್ದಿದೆಯೆ?” ಎಂದು ಅವರು ಸವಾಲು ಹಾಕಿದರು.
“ನಿಮ್ಮ ಬಳಿ ಲೆಕ್ಕವಿದ್ದರೆ ತೋರಿಸಿ. ನಾನು ದಿಲ್ಲಿಗೆ ಬಂದು, ನಗರದ ಹೃದಯ ಭಾಗದಲ್ಲಿ ಕ್ಷಮೆ ಯಾಚಿಸುತ್ತೇನೆ. ಇಲ್ಲವಾದರೆ, ನಾನು ನನ್ನ ಲೆಕ್ಕ ನೀಡುತ್ತೇನೆ. ನೀವು ತೆಲಂಗಾಣ ಸರಕಾರವನ್ನು ಪ್ರಶಂಸಿಸಿ” ಎಂದು ಅವರು ಪಂಥಾಹ್ವಾನ ನೀಡಿದರು.
ಇದೇ ವೇಳೆ ಕಾಂಗ್ರೆಸ್ ಸರಕಾರದ ಬಗ್ಗೆ ಅಸಂಬದ್ಧವಾಗಿ ಮಾತನಾಡಬೇಡಿ ಎಂದೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಅವರು ಎಚ್ಚರಿಕೆ ನೀಡಿದರು.