ಕೈ ಕೋಳ ತೊಡಿಸಿ ರೈತನನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು ; ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ವಿಚಾರಣೆಗೆ ಆದೇಶಿಸಿದ ತೆಲಂಗಾಣ ಸಿಎಂ
ಎ.ರೇವಂತ್ ರೆಡ್ಡಿ | PTI
ಹೈದರಾಬಾದ್ : ನವೆಂಬರ್ 11ರಂದು ಸರಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಬಂಧಿತನಾಗಿದ್ದ ರೈತನನ್ನು ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿನ ಆಸ್ಪತ್ರೆಯೊಂದಕ್ಕೆ ಕೈಕೋಳ ತೊಡಿಸಿ ಕರೆದುಕೊಂಡು ಬಂದಿದ್ದ ಘಟನೆಯಿಂದ ವಿವಾದ ಭುಗಿಲೆದ್ದಿದ್ದು, ಇದರ ಬೆನ್ನಿಗೇ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ವಿಚಾರಣೆಗೆ ಆದೇಶಿಸಿದ್ದಾರೆ.
ರೈತ ಹೀರಾ ನಾಯ್ಕ್ನನ್ನು ಕೈಕೋಳ ತೊಡಿಸಿ ಯಾಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪ್ರಶ್ನಿಸಿರುವ ರೇವಂತ್ ರೆಡ್ಡಿ, ಈ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಘಟನೆಗಾಗಿ ಕಾಂಗ್ರೆಸ್ ಸರಕಾರವನ್ನು ಖಂಡಿಸಿರುವ ವಿರೋಧ ಪಕ್ಷವಾದ ಬಿಆರ್ಎಸ್ನ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್, ಅನಾರೋಗ್ಯಪೀಡಿತ ರೈತನನ್ನು ಕೈಕೋಳ ತೊಡಿಸಿ ಆಸ್ಪತ್ರೆಗೆ ಕರೆದೊಯ್ದಿರುವುದು ಅಮಾನವೀಯ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರತಿನಿಧಿಸುತ್ತಿರುವ ಕೋಡಂಗಲ್ ವಿಧಾನಸಭಾ ಕ್ಷೇತ್ರದಲ್ಲಿನ ಲಗಚರ್ಲ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಭೂಸ್ವಾಧೀನ ವಿಚಾರಣೆಯ ಸಂದರ್ಭದಲ್ಲಿ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಸಂಬಂಧ 25 ಮಂದಿಯನ್ನು ಬಂಧಿಸಿ, ಜೈಲಿಗೆ ಕಳಿಸಲಾಗಿತ್ತು.