ತೆಲಂಗಾಣ | ದಾಳಿಂಬೆ ಕಿತ್ತ ಆರೋಪದಲ್ಲಿ ದಲಿತ ಬಾಲಕನಿಗೆ ಕಟ್ಟಿ ಹಾಕಿ ಥಳಿತ
PC : deccanherald.com
ಹೈದರಾಬಾದ್: ತನ್ನ ತೋಟದಿಂದ ದಾಳಿಂಬೆ ಕಿತ್ತ ಆರೋಪದಲ್ಲಿ ವ್ಯಕ್ತಿಯೋರ್ವ 14 ವರ್ಷದ ದಲಿತ ಬಾಲಕನನ್ನು ಕಟ್ಟಿ ಹಾಕಿ ಥಳಿಸಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಈ ಘಟನೆ ಸಹಬಾದ್ ಮಂಡಲ್ ನ ಕೇಸರಂ ಗ್ರಾಮದಲ್ಲಿ ಜೂನ್ 22ರಂದು ನಡೆದಿದೆ. ಪರಿಶಿಷ್ಟ ಜಾತಿಗೆ ಸೇರಿದ ಬಾಲಕನೋರ್ವ ಮನೆಯೊಂದರ ಕಂಪೌಂಡ್ ಗೋಡೆ ಹಾರಿ ಗಿಡದಿಂದ ದಾಳಿಂಬೆ ಕಿತ್ತಿದ್ದಾನೆ ಎಂದು ಆರೋಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸರಕಾರಿ ಶಾಲೆಯ ನಿವೃತ್ತ ಅಧ್ಯಾಪನಾಗಿರುವ ಮನೆಯ ಮಾಲಕ ಬಾಲಕನನ್ನು ಹಿಡಿದಿದ್ದಾನೆ. ಆತನ ಕೈ ಹಾಗೂ ಕಾಲುಗಳನ್ನು ಹಗ್ಗದಿಂದ ಕಟ್ಟಿ ಥಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ನೆಲದಲ್ಲಿ ಬಿದ್ದುಗೊಂಡಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಬಾಲಕನ ತಾಯಿ ಜೂನ್ 24ರಂದು ದಾಖಲಿಸಿದ ದೂರಿನ ಆಧಾರದಲ್ಲಿ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್, ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ಸೆಕ್ಷನ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.