ತೆಲಂಗಾಣ ಚುನಾವಣೆ: ಮೂರು ಪಕ್ಷಗಳ ಪ್ರಚಾರ ವಿಡಿಯೋ ನಿಷೇಧಿಸಿದ ಆಯೋಗ
ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದ್ದ 15 ವಿಡಿಯೊ ಜಾಹೀರಾತುಗಳನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ (ಎಂಸಿಎಂಸಿ) ನಿಯಮಾವಳಿ ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವಿರೂಪಗೊಳಿಸಿ ಹಾಗೂ ದುರ್ಬಳಕೆ ಮಾಡಿಕೊಂಡು ಪ್ರಸರಿಸುತ್ತಿದ್ದ ಅಂಶಗಳನ್ನು ಒಳಗೊಂಡ ಜಾಹೀರಾತುಗಳನ್ನು ನಿಷೇಧಿಸಲಾಗಿದೆ ಎಂದು ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿ ವಿಕಾಸ್ ರಾಜ್ ಹೇಳಿದ್ದಾರೆ.
ನಿಷೇಧಕ್ಕೆ ಒಳಗಾದ 15 ಜಾಹೀರಾತುಗಳ ಪೈಕಿ ಆರು ಕಾಂಗ್ರೆಸ್ ಪಕ್ಷಕ್ಕೆ ಸೇರಿವೆ. ಜತೆಗೆ ಬಿಜೆಪಿ ಹಾಗೂ ಆಡಳಿತಾರೂಢ ಭಾರತ ರಾಷ್ಟ್ರೀಯ ಸಮಿತಿ (ಬಿಆರ್ಎಸ್)ಗೆ ಸೇರಿದ ಐದು ಮತ್ತು ನಾಲ್ಕು ಜಾಹೀರಾತುಗಳನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನವೆಂಬರ್ 30ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.
ರಾಜ್ಯಮಟ್ಟದ ಎಂಸಿಎಂಸಿ ಈಗಾಗಲೇ ಅಕ್ಟೋಬರ್ 9 ರಿಂದೀಚೆಗೆ ವಿವಿಧ ಪಕ್ಷಗಳಿಗೆ ಸೇರಿದ 416 ಜಾಹೀರಾತುಗಳನ್ನು ಪ್ರಮಾಣೀಕರಿಸಿದೆ. ಆದರೆ ಎಂಸಿಎಂಸಿ ಪ್ರಮಾಣಿಸಿದ ಕಾಂಗ್ರೆಸ್, ಬಿಜೆಪಿ ಹಾಗೂ ಬಿಆರ್ಎಸ್ ನ 15 ಜಾಹೀರಾತುಗಳಲ್ಲಿ ವಿರೂಪಗೊಳಿಸಿದ, ತಿರುಚಿದ ಹಾಗೂ ತಪ್ಪಾಗಿ ಉಲ್ಲೇಖಿಸಿದ ಅಂಶಗಳನ್ನು ಹೊಂದಿದ ಕಾರಣಕ್ಕಾಗಿ ಅವುಗಳನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.