ಶಾಲೆಗಳಲ್ಲಿ ತೆಲುಗು ಭಾಷೆ ಬೋಧನೆ, ಕಲಿಕೆ ಕಡ್ಡಾಯಗೊಳಿಸಿದ ತೆಲಂಗಾಣ ಸರಕಾರ

ಸಾಂದರ್ಭಿಕ ಚಿತ್ರ
ಹೈದರಾಬಾದ್: 2025-26ರ ಶೈಕ್ಷಣಿಕ ವರ್ಷದಿಂದ ಸಿಬಿಎಸ್ಇ, ಐಸಿಎಸ್ಇ, ಐಬಿ ಮತ್ತು ರಾಜ್ಯದ ಇತರ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತೆಲುಗು ಭಾಷೆ ಬೋಧನೆ ಮತ್ತು ಕಲಿಕೆಯನ್ನು ಕಡ್ಡಾಯಗೊಳಿಸಿ ತೆಲಂಗಾಣ ಸರಕಾರ ಆದೇಶ ಹೊರಡಿಸಿದೆ.
2018ರಲ್ಲಿ ತೆಲಂಗಾಣದ ಶಾಲೆಗಳಲ್ಲಿ ತೆಲುಗು ಕಡ್ಡಾಯ ಬೋಧನೆ ಮತ್ತು ಕಲಿಕೆ ಬಗ್ಗೆ ತೆಲಂಗಾಣ ಸರಕಾರ ಕಾಯ್ದೆಯನ್ನು ಪರಿಚಯಿಸಿತು. ಇದು ಸರಕಾರ ನಡೆಸುವ ಜಿಲ್ಲಾ ಪರಿಷತ್, ಮಂಡಲ ಪರಿಷತ್, ಅನುದಾನಿತ ಶಾಲೆಗಳು, ಹಾಗೆಯೇ CBSE, ICSE, IB ಮತ್ತು ಇತರ ಮಂಡಳಿ-ಸಂಯೋಜಿತ ಶಾಲೆಗಳಲ್ಲಿ ತೆಲುಗು ಕಲಿಸುವುದನ್ನು ಕಡ್ಡಾಯಗೊಳಿಸಿತು. ಆದರೆ ಹಿಂದಿನ ಬಿಆರ್ಎಸ್ ಸರಕಾರ ವಿವಿಧ ಕಾರಣಗಳಿಂದ ಈ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತಂದಿಲ್ಲ. ಪ್ರಸ್ತುತ ಕಾಂಗ್ರೆಸ್ ಸರಕಾರ ರಾಜ್ಯಾದ್ಯಂತ ಶಾಲೆಗಳಲ್ಲಿ ಕಾಯ್ದೆಯನ್ನು ಜಾರಿಗೊಳಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಸರಕಾರವು ಈಗಾಗಲೇ ಶಾಲಾ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದೆ. ಇದಲ್ಲದೆ ಮುಂಬರುವ ಶೈಕ್ಷಣಿಕ ವರ್ಷದಿಂದಲೇ CBSE, ICSE ಮತ್ತು ಇತರ ಮಂಡಳಿಗಳ ಶಾಲೆಯಲ್ಲಿನ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸುಲಭವಾಗುವಂತೆ ಸರಳ ತೆಲುಗು ಪಠ್ಯ ಪುಸ್ತಕವನ್ನು ಬಳಸುವಂತೆ ಸಿಎಂ ರೇವಂತ್ ರೆಡ್ಡಿ ಸೂಚಿಸಿದ್ದಾರೆ.