ಜಾತಿ ಸಮೀಕ್ಷೆ ದತ್ತಾಂಶ ವಿಶ್ಲೇಷಣೆಗೆ ಸಮಿತಿ ರಚಿಸಿದ ತೆಲಂಗಾಣ ಸರಕಾರ: ಫ್ರೆಂಚ್ ಆರ್ಥಿಕ ತಜ್ಞ ಥಾಮಸ್ ಪಿಕೆಟ್ಟಿಯ ಸೇರ್ಪಡೆ
ಫ್ರೆಂಚ್ ಆರ್ಥಿಕ ತಜ್ಞ ಥಾಮಸ್ ಪಿಕೆಟ್ಟಿ - Photo Credit: Reuters
ಹೈದರಾಬಾದ್: ಇತ್ತೀಚೆಗೆ ತಾನು ನಡೆಸಿದ ಜಾತಿ ಸಮೀಕ್ಷೆಯ ದತ್ತಾಂಶ ವಿಶ್ಲೇಷಣೆ ಹಾಗೂ ವ್ಯಾಖ್ಯಾನಕ್ಕಾಗಿ ತೆಲಂಗಾಣ ಸರಕಾರ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ. ಬಿ.ಸುದರ್ಶನ್ ರೆಡ್ಡಿ ನೇತೃತ್ವದಲ್ಲಿ 11 ಮಂದಿ ಸದಸ್ಯರ ಸ್ವತಂತ್ರ ತಜ್ಞ ಕಾರ್ಯಕಾರಿ ಗುಂಪನ್ನು ರಚಿಸಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಇದೆ ಎಂದು ವಿರೋಧ ಪಕ್ಷಗಳು ಜಾತಿ ಸಮೀಕ್ಷೆಯ ಶೋಧನೆಗಳನ್ನು ಟೀಕಿಸಿದ ಬೆನ್ನಿಗೇ, ತೆಲಂಗಾಣ ಸರಕಾರ ಈ ಕ್ರಮ ಕೈಗೊಂಡಿದೆ.
ಕಳೆದ ತಿಂಗಳು ರಾಜ್ಯಾದ್ಯಂತ ಬೃಹತ್ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಹಾಗೂ ಜಾತಿ ಸಮೀಕ್ಷೆ, 2024 ಅನ್ನು ನಡೆಸಲಾಗಿತ್ತು. ಈ ಸಮೀಕ್ಷೆಯ ಫಲಿತಾಂಶಗಳನ್ನು ವಿಶ್ಲೇಶಷಿಸಲು ರಚಿಸಲಾಗಿರುವ ತಜ್ಞರ ಗುಂಪಿನಲ್ಲಿ ಫ್ರೆಂಚ್ ಆರ್ಥಿಕ ತಜ್ಞ ಥಾಮಸ್ ಪಿಕೆಟ್ಟಿ ಹಾಗೂ ಬೆಲ್ಜಿಯಂ ಮೂಲದ ಭಾರತೀಯ ಆರ್ಥಿಕ ತಜ್ಞ ಜೀನ್ ಡ್ರೀಝ್ ಮತ್ತಿತರ ಪ್ರಖ್ಯಾತ ಆರ್ಥಿಕ ತಜ್ಞರನ್ನು ಸೇರ್ಪಡೆ ಮಾಡಲಾಗಿದೆ. ಒಂದು ತಿಂಗಳೊಳಗಾಗಿ ತನ್ನ ವಿಶ್ಲೇಷಣೆಯನ್ನು ಸಲ್ಲಿಸಬೇಕು ಎಂದು ಈ ತಜ್ಞರ ಗುಂಪಿಗೆ ಗಡುವು ವಿಧಿಸಲಾಗಿದೆ.
ಸ್ಕೂಲ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಇನ್ ದಿ ಸೋಷಿಯಲ್ ಸೈನ್ಸನ್ ನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಥಾಮಸ್ ಪಿಕೆಟ್ಟಿ, ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಸಹ ಮುಖ್ಯಸ್ಥರೂ ಆಗಿದ್ದಾರೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಜಾತಿ ಸಮೀಕ್ಷೆಯ ದತ್ತಾಂಶಗಳನ್ನು ಆಧರಿಸಿ, ವಿವಿಧ ಸಾಮಾಜಿಕ ವಲಯಗಳಿಗೆ ಸಾಕ್ಷ್ಯಾಧಾರಿತ ನೀತಿಗಳನ್ನು ರೂಪಿಸಲು ತೆಲಂಗಾಣ ಅಭಿವೃದ್ಧಿ ಯೋಜನೆ ಸಂಸ್ಥೆಯ ಸಲಹಾ ಸಮಿತಿಯು ಈ ಕಾರ್ಯಕಾರಿ ಗುಂಪನ್ನು ರಚಿಸಿದೆ.
ಈ ಕಾರ್ಯಕಾರಿ ಗುಂಪಿನ ನೇತೃತ್ವವನ್ನು ನಿವೃತ್ತ ನ್ಯಾ. ಸುದರ್ಶನ್ ರೆಡ್ಡಿ ವಹಿಸಲಿದ್ದು, ಸಾಮಾಜಿಕ ವಿಜ್ಞಾನಿ ಪ್ರೊ. ಕಾಂಚಾ ಐಲಯ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ, ಪ್ರೊ. ಶಾಂತಾ ಸಿನ್ಹಾ, ಪ್ರೊ. ಹಿಮಾಂಶು, ಡಾ. ಸುಖಾದಿಯೊ ಥೋರಟ್, ನಿಖಿಲ್ ಡೇ, ಪ್ರೊ. ಭಾಂಗ್ಯಾ ಭುಕ್ಯ, ಪ್ರೊ. ಪುರುಷೋತ್ತಮ್ ರೆಡ್ಡಿ, ಪ್ರೊ. ಜೀನ್ ಡ್ರೀಝ್, ಹಾಗೂ ಪ್ರೊ. ಥಾಮಸ್ ಪಿಕೆಟ್ಟಿ ಈ ಗುಂಪಿನ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರವೀಣ್ ಚಕ್ರವತಿ ಈ ಗುಂಪಿನ ಸದಸ್ಯ ಸಂಚಾಲಕರಾಗಿ ಕೆಲಸ ಮಾಡಲಿದ್ದಾರೆ.