ಜಿಪಿಎಸ್ ಸಿಗ್ನಲ್ ಕಳೆದುಕೊಂಡು ಸೌದಿಯ ಮರುಭೂಮಿಯಲ್ಲಿ ಬಾಕಿಯಾದ ಭಾರತೀಯ| ನಿರ್ಜಲೀಕರಣ, ಬಾಯಾರಿಕೆಯಿಂದ ಮೃತ್ಯು
ಶೆಹಝಾದ್ ಖಾನ್ | PC : NDTV
ಹೈದರಾಬಾದ್: ಜಿಪಿಎಸ್ ಸಿಗ್ನಲ್ ಕಳೆದುಕೊಂಡು, ನಿರ್ಜಲೀಕರಣ ಹಾಗೂ ಬಾಯಾರಿಕೆಯಿಂದ 27 ವರ್ಷದ ತೆಲಂಗಾಣ ವ್ಯಕ್ತಿ ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದ ರಬ್' ಅಲ್ ಖಲಿ ಮರುಭೂಮಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕರೀಂನಗರದ ನಿವಾಸಿ ಮುಹಮ್ಮದ್ ಶೆಹಝಾದ್ ಖಾನ್ ಎಂದು ಗುರುತಿಸಲಾಗಿದ್ದು, ಅವರು ಕಳೆದ ಮೂರು ವರ್ಷಗಳಿಂದ ಸೌದಿ ಅರೇಬಿಯಾದ ದೂರಸಂಪರ್ಕ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಅವರು ವಿಶ್ವದ ಅತ್ಯಂತ ಅಪಾಯಕಾರಿ ಹಾಗೂ ನಿರ್ಜನ ಪ್ರದೇಶವಾದ ರಬ್' ಅಲ್ ಖಲಿ ಮರುಭೂಮಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
650 ಕಿಮೀ ವ್ಯಾಪ್ತಿ ಹೊಂದಿರುವ ರಬ್' ಅಲ್ ಖಲಿ ಮರುಭೂಮಿಯು ತನ್ನ ಪ್ರತಿಕೂಲ ವಾತಾವರಣಕ್ಕೆ ಕುಖ್ಯಾತವಾಗಿದ್ದು, ಸೌದಿ ಅರೇಬಿಯಾದ ದಕ್ಷಿಣ ಪ್ರಾಂತ್ಯವನ್ನು ದಾಟಿ ನೆರೆಯ ದೇಶಗಳಿಗೂ ಹಬ್ಬಿಕೊಂಡಿದೆ.
ಸುಡಾನ್ ಪ್ರಜೆಯೊಂದಿಗೆ ತೆರಳಿದ್ದ ಶೆಹಝಾದ್, ಮಾರ್ಗಮಧ್ಯದಲ್ಲಿ ತಮ್ಮ ಜಿಪಿಎಸ್ ಸಿಗ್ನಲ್ ಕಳೆದುಕೊಂಡಿದೆ. ಇದರೊಂದಿಗೆ, ಶೆಹಝಾದ್ ಮೊಬೈಲ್ ಬ್ಯಾಟರಿ ಕೂಡಾ ಮುಗಿದು ಹೋಗಿದ್ದರಿಂದ, ಅವರು ನೆರವಿಗಾಗಿ ಕರೆ ಮಾಡಲು ಸಾಧ್ಯವಾಗಿಲ್ಲ. ಅವರ ವಾಹನದಲ್ಲಿನ ಇಂಧನ ಕೂಡಾ ಖಾಲಿಯಾಗಿದ್ದರಿಂದ, ಅವರು ಆಹಾರ ಮತ್ತು ನೀರಿಲ್ಲದೆ ಮರುಭೂಮಿಯ ವಿಪರೀತ ಬೇಗೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಅವರಿಬ್ಬರೂ ಬದುಕುಳಿಯಲು ಹರ ಸಾಹಸ ಮಾಡಿದರೂ, ಬಿಸಿಲಿನ ಪ್ರಮಾಣ ತೀವ್ರ ಸ್ವರೂಪಕ್ಕೆ ಏರಿಕೆಯಾಗಿದ್ದರಿಂದ, ಇಬ್ಬರೂ ನಿರ್ಜಲೀಕರಣ ಮತ್ತು ಬಾಯಾರಿಕೆಯಿಂದ ಕೊನೆಯುಸಿರೆಳೆದಿದ್ದಾರೆ.
ಶೆಹಝಾದ್ ಹಾಗೂ ಅವರ ಸಹೋದ್ಯೋಗಿಯ ಮೃತದೇಹಗಳು ನಾಲ್ಕು ದಿನಗಳ ನಂತರ ಗುರುವಾರದಂದು ತಮ್ಮ ವಾಹನದ ಪಕ್ಕ ಮರಳಿನಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿವೆ.