ತೆಲಂಗಾಣ | ಸುರಂಗ ಕುಸಿತದ ಸ್ಥಳಕ್ಕೆ ತಲುಪುವಲ್ಲಿ ರಕ್ಷಣಾ ತಂಡ ಯಶಸ್ವಿಯಾದರೂ, ಅವಶೇಷಗಳಡಿ ಸಿಲುಕಿದವವರನ್ನು ಪತ್ತೆ ಹಚ್ಚುವಲ್ಲಿ ವಿಫಲ

Photo credit: PTI
ನಾಗರಕರ್ನೂಲ್: ಮಹತ್ವದ ಬೆಳವಣಿಗೆಯೊಂದರಲ್ಲಿ ಐದು ದಿನಗಳ ಹಿಂದೆ ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗದ ಪಾರ್ಶ್ವವೊಂದು ಕುಸಿದು, ಎಂಟು ಮಂದಿ ಸಿಲುಕಿಕೊಂಡಿರುವ ಅಪಘಾತದ ಸ್ಥಳಕ್ಕೆ ರಕ್ಷಣಾ ತಂಡದ ತಜ್ಞರು ತಲುಪುವಲ್ಲಿ ಯಶಸ್ವಿಯಾಗಿದ್ದು, ಅವರು ಸುರಂಗದ ಕೊನೆಯವರೆಗೂ ಹೋಗಿ ವಾಪಸು ಬಂದಿದ್ದಾರೆ ಎಂದು ಬುಧವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
“NDRF, SDRF ಹಾಗೂ ʼರ್ಯಾಟ್ ಹೋಲ್ ಮೈನರ್ಸ್ʼ ಒಳಗೊಂಡಿರುವ 20 ಸದಸ್ಯರ ರಕ್ಷಣಾ ತಂಡವು ಸುರಂಗದ ಕೊನೆಯ ತುದಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಆದರೆ, ಅಲ್ಲಿ ಸಾಕಷ್ಟು ಕಲ್ಲು - ಮಣ್ಣುಗಳ ರಾಶಿ ಇರುವುದರಿಂದ ಅದನ್ನು ದಾಟಿಕೊಂಡು ಹೋಗುವ ಕುರಿತು ಅವರು ಯೋಜನೆ ರೂಪಿಸುತ್ತಿದ್ದಾರೆ” ಎಂದು ನಾಗರಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಗಾಯಕ್ವಾಡ್ ತಿಳಿಸಿದ್ದಾರೆ.
ಕಳೆದ ರಾತ್ರಿ ಅಪಘಾತ ಸಂಭವಿಸಿದ್ದ ಸ್ಥಳದಲ್ಲಿ ರಕ್ಷಣಾ ತಂಡವು ಶೋಧ ಕಾರ್ಯ ನಡೆಸಿದರೂ, ಏನೂ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತೀಯ ಭೌಗೋಳಿಕ ಸಮೀಕ್ಷಾ ಸಂಸ್ಥೆ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದ್ದು, ಮಣ್ಣಿನ ಸಾಮರ್ಥ್ಯ ಹಾಗೂ ಇನ್ನಿತರ ವಿಷಯಗಳ ಕುರಿತು ಇನ್ನೂ ತನ್ನ ವರದಿ ಸಲ್ಲಿಸಬೇಕಿದೆ ಎಂದು ಹೇಳಿದ್ದಾರೆ.
ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗದಲ್ಲಿ ನಿರಂತರವಾಗಿ ಕೆಸರು ಹಾಗೂ ನೀರು ಸುರಿಯುತ್ತಿದ್ದರೂ, ಸೇನೆ, ನೌಕಾಪಡೆ, ಎನ್ಡಿಆರ್ಎಫ್, ಜಿಎಸ್ಐ ಹಾಗೂ ಇನ್ನಿತರ ಸಂಸ್ಥೆಗಳ ತಜ್ಞರು ತಮ್ಮ ಜೀವದ ಹಂಗು ತೊರೆದು ಸುರಂಗದೊಳಗೆ ಸಿಲುಕಿಕೊಂಡಿರುವ ಕಾರ್ಮಿಕರನ್ನು ಪತ್ತೆ ಹಚ್ಚಲು ದಣಿವರಿಯದ ಕಾರ್ಯಾಚರಣೆ ನಡೆಸುತ್ತಿದ್ದು, ಬುಧವಾರ ಕೂಡಾ ಅವರು ತಮ್ಮ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.
ಮಂಗಳವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ, ಈ ಸುರಂಗ ರಕ್ಷಣಾ ಕಾರ್ಯಾಚರಣೆ ಬಹುಶಃ ಇಡೀ ವಿಶ್ವದಲ್ಲಿ ಅಥವಾ ಕನಿಷ್ಠ ಪಕ್ಷ ಭಾರತದಲ್ಲಿ ನಡೆಯುತ್ತಿರುವ ಅತ್ಯಂತ ಸಂಕೀರ್ಣ ಹಾಗೂ ಕಠಿಣ ರಕ್ಷಣಾ ಕಾರ್ಯಾಚರಣೆಯಾಗಿದ್ದು, ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗಕ್ಕೆ ಕೇವಲ ಒಂದು ಪ್ರವೇಶ ಮತ್ತು ನಿರ್ಗಮನ ಮಾತ್ರವಿದೆ ಎಂದು ತಿಳಿಸಿದ್ದಾರೆ.
ಸುರಂಗದೊಳಕ್ಕೆ ನಿರಂತರವಾಗಿ ಆಮ್ಲಜನಕವನ್ನು ಪೂರೈಸುತ್ತಿದ್ದರೂ, ಸುರಂಗದೊಳಗೆ ಸಿಲುಕಿಕೊಂಡಿರುವವರನ್ನು ಇದುವರೆಗೆ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದೂ ಅವರು ಹೇಳಿದ್ದಾರೆ.
ಶನಿವಾರ (ಫೆ. 22) ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗದ ಪಾರ್ಶ್ವವೊಂದು ಕುಸಿದು ಬಿದ್ದ ಪರಿಣಾಮ, ಎಂಟು ಮಂದಿ ಕಾರ್ಮಿಕರು ಕಳೆದ ಐದು ದಿನಗಳಿಂದ ಸುರಂಗದೊಳಗೆ ಸಿಲುಕೊಂಡಿದ್ದಾರೆ.