ತಮಿಳುನಾಡು | ಮಾವುತನ ಮೇಲೆ ದಾಳಿ ನಡೆಸಿದ ದೇವಸ್ಥಾನದ ಆನೆ ; ಇಬ್ಬರ ಮೃತ್ಯು
ಸಾಂದರ್ಭಿಕ ಚಿತ್ರ | PC : freepik.com
ಚೆನ್ನೈ : ದೇವಸ್ಥಾನದ ಆನೆಯೊಂದು ಮಾವುತ ಹಾಗೂ ಆತನ ನೆಂಟನ ಮೇಲೆ ದಾಳಿ ನಡೆಸಿ, ತುಳಿದು ಹತ್ಯೆಗೈದಿರುವ ಘಟನೆ ಸೋಮವಾರ ತೂತುಕುಡಿ ಜಿಲ್ಲೆಯ ತಿರುಚೆಂಡೂರ್ ಗ್ರಾಮದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ನಡೆದಿದೆ.
ಆನೆ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾವುತ ಉದಯಕುಮಾರ್ ಹಾಗೂ ಆತನ ನೆಂಟ ಶಿವಬಾಲನ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದೇವಾಲಯದ ಶೆಡ್ ಗೆ ಪ್ರವೇಶಿಸಿದ ಶಿವಬಾಲನ್, ಸೆಲ್ಫಿ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ದೇವಯಾನಿ ಎಂಬ ಆನೆ ಅದರೊಳಗಿತ್ತು ಎನ್ನಲಾಗಿದೆ.
ಆಗ ಆನೆಯು ಶಿವಬಾಲನ್ ಮೇಲೆ ದಾಳಿ ನಡೆಸಿದ್ದು, ತನ್ನ ನೆಂಟನನ್ನು ರಕ್ಷಿಸಲು ಓಡಿ ಬಂದ ಮಾವುತ ಉದಯಕುಮಾರ್ ನನ್ನೂ ತುಳಿದು ಹಾಕಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು, “ಶಿವಬಾಲನ್ ವರ್ತನೆಯಿಂದ ಆನೆ ಕುಪಿತಗೊಂಡು, ದಾಳಿ ನಡೆಸಿದೆ ಅನ್ನಿಸುತ್ತಿದೆ” ಎಂದು ಹೇಳಿದ್ದಾರೆ.
“ನಾವು ಈ ಘಟನೆಯ ತನಿಖೆ ನಡೆಸುತ್ತಿದ್ದು, ಇಬ್ಬರು ಮೃತಪಟ್ಟಿರುವುದನ್ನು ನಾವು ದೃಢಪಡಿಸುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮಿಳುನಾಡಿನ ಬಹುತೇಕ ದೇವಾಲಯಗಳಲ್ಲಿ ಕನಿಷ್ಠ ಪಕ್ಷ ಒಂದು ಆನೆಯಿದ್ದು, ಭಕ್ತಾದಿಗಳ, ವಿಶೇಷವಾಗಿ ಮಕ್ಕಳ ಪಾಲಿಗೆ ಪ್ರಮುಖ ಆಕರ್ಷಣೆಯಾಗಿದೆ.
ಈ ಘಟನೆಯ ನಂತರ, ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲು ದೇವಾಲಯದ ಬಾಗಿಲು ಮುಚ್ಚಲಾಯಿತು.