ದೇವಾಲಯಗಳು ಹಿಂಸೆಗೆ ಕಾರಣವಾಗುತ್ತಿದ್ದರೆ ಅವುಗಳನ್ನು ಮುಚ್ಚುವುದೇ ಉತ್ತಮ: ಮದ್ರಾಸ್ ಹೈಕೋರ್ಟ್
Photo: ಮದ್ರಾಸ್ ಹೈಕೋರ್ಟ್ | PTI
ಚೆನ್ನೈ: ಇತ್ತೀಚೆಗೆ ದೇವಾಲಯದ ಉತ್ಸವಗಳು ಗುಂಪುಗಳಿಗೆ ಪರಸ್ಪರ ಶಕ್ತಿ ಪ್ರದರ್ಶನ ಮಾಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ, ಅಲ್ಲಿ ಯಾವುದೇ ಭಕ್ತಿ ಉಳಿದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಿಷಾದ ವ್ಯಕ್ತಪಡಿಸಿದೆ.
‘ದೇವಾಲಯದ ಉತ್ಸವಗಳು ಹಿಂಸಾಚಾರವನ್ನು ಮುಂದುವರಿಸಿದರೆ, ದೇವಾಲಯಗಳ ಅಸ್ತಿತ್ವಕ್ಕೆ ಯಾವುದೇ ಅರ್ಥವಿಲ್ಲ. ಹಾಗಿರುವಾಗ,, ಹಿಂಸಾಚಾರವನ್ನು ತಡೆಯಲು ಅಂತಹ ದೇವಾಲಯಗಳನ್ನು ಮುಚ್ಚುವುದು ಉತ್ತಮ..’ ಎಂದು ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರು ಹೇಳಿದ್ದಾರೆ ಎಂದು livelaw.in ವರದಿ ಮಾಡಿದೆ.
ಶ್ರೀ ರುದ್ರ ಮಹಾ ಕಾಳಿಯಂ ದೇವಸ್ಥಾನದಲ್ಲಿ ಉತ್ಸವ ನಡೆಸಲು ಪೊಲೀಸ್ ರಕ್ಷಣೆ ಕೋರಿ ಕೆ.ತಂಗರಸು ಎಂಬವರು ಸಲ್ಲಿಸಿದ ಮನವಿಯನ್ನು ನ್ಯಾಯಪೀಠವು ಆಲಿಸಿತು.
ದೇವಾಲಯದ ಆನುವಂಶಿಕ ಟ್ರಸ್ಟಿ ಎಂದು ಅರ್ಜಿದಾರರು ಹೇಳಿಕೊಂಡಿದ್ದು, “ಈ ಬಾರಿಯ ದೇವಾಲಯದ ವಾರ್ಷಿಕ ಉತ್ಸವವನ್ನು ಜುಲೈ 23 ರಿಂದ ಆಗಸ್ಟ್ 1 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ರಕ್ಷಣೆ ಒದಗಿಸಬೇಕು” ಎಂದು ಅರ್ಜಿದಾರರು ಕೋರಿದ್ದಾರೆ.
ಉತ್ಸವವನ್ನು ನಡೆಸುವ ಬಗ್ಗೆ ಎರಡು ಗುಂಪುಗಳ ನಡುವೆ ವಿವಾದವಿದೆ. ತಹಶೀಲ್ದಾರ್ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ ಕರೆದರೂ ಇತ್ಯರ್ಥವಾಗಲಿಲ್ಲ. ದೇವಸ್ಥಾನದೊಳಗೆ ವಿನಾಯಕನ ವಿಗ್ರಹವನ್ನು ಯಾರು ಪ್ರತಿಷ್ಠಾಪಿಸುತ್ತಾರೆ ಎಂಬ ವಿವಾದವೂ ಇದೆ. ಹಾಗಾಗಿ ಉತ್ಸವ ನಡೆಸಲು ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುತ್ತದೆ ಎಂದು ಸರ್ಕಾರದ ಪರ ವಕೀಲರು ವಾದ ಮಾಡಿದ್ದಾರೆ.
ಗುಂಪುಗಳ ನಡುವಿನ ವಿವಾದವನ್ನು ಪರಿಹರಿಸುವಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಮಯ ಮತ್ತು ಶಕ್ತಿಯನ್ನು ಅನಗತ್ಯವಾಗಿ ವ್ಯರ್ಥಮಾಡಲಾಗುತ್ತದೆ. ಪೊಲೀಸ್ ಮತ್ತು ಕಂದಾಯವು ಇತರ ಪ್ರಮುಖ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ, ಹೀಗಾಗಿ ಹೀಗಾಗಿ, ಪೊಲೀಸ್ ರಕ್ಷಣೆ ನೀಡುವ ಪ್ರಶ್ನೆಯೇ ಇಲ್ಲ ಮತ್ತು ಕಕ್ಷಿದಾರರು ತಮ್ಮ ಅಹಂಕಾರವನ್ನು ಮುಂಚೂಣಿಗೆ ಬಾರದೆ ಶಾಂತಿಯುತವಾಗಿ ಹಬ್ಬವನ್ನು ನಡೆಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿದೆ.