ಅಸ್ಸಾಂ | ತೃತೀಯ ದರ್ಜೆ ನೌಕರರ ನೇಮಕಾತಿ ಪರೀಕ್ಷೆ: ಅಕ್ರಮ ತಡೆಯಲು ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ
Photo : The Hindu
ಗುವಾಹಟಿ : ತೃತೀಯ ದರ್ಜೆ ನೌಕರರ ನೇಮಕಾತಿ ಲಿಖಿತ ಪರೀಕ್ಷೆ ಹಿನ್ನೆಲೆ ಅಸ್ಸಾಂ ರಾಜ್ಯದಾದ್ಯಂತ ರವಿವಾರ ಬೆಳಿಗ್ಗೆ 10ರಿಂದ ಮೂರೂವರೆ ಗಂಟೆಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಅಸ್ಸಾಂ ಸರಕಾರ ಆದೇಶಿಸಿದ್ದು, ಪರೀಕ್ಷೆಗಳಲ್ಲಿನ ಅಕ್ರಮ ತಡೆಗಟ್ಟಲು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಈ ಕುರಿತು ಗೃಹ ಮತ್ತು ರಾಜಕೀಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ತಿವಾರಿ ಅಧಿಸೂಚನೆ ಹೊರಡಿಸಿದ್ದು, ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸುವ ದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಅಸ್ಸಾಂ ಇಡೀ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್, ಮೊಬೈಲ್ ವೈ-ಫೈ ಸೇವೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಸ್ಥಗಿತಗೊಳಿಸಲಾಗಿದೆ. ಆದರೆ ಧ್ವನಿ ಕರೆಗಳು ಮತ್ತು ಬ್ರಾಡ್ಬ್ಯಾಂಡ್ ಸಂಪರ್ಕವು ಎಂದಿನಂತೆ ಮುಂದುವರಿಯಲಿದೆ.
ಅಸ್ಸಾಂನಲ್ಲಿ ತೃತೀಯ ದರ್ಜೆ ನೌಕರರ ನೇಮಕಾತಿಗೆ ಲಿಖಿತ ಪರೀಕ್ಷೆ ಬೆಳಿಗ್ಗೆ 10.30ರಿಂದ ಆರಂಭವಾಗಿದ್ದು, ಮಧ್ಯಾಹ್ನ 1.30ರವರೆಗೆ ನಡೆಯಲಿದೆ.
ಅಸ್ಸಾಂನಲ್ಲಿ ಈ ಹಿಂದೆ 2022ರಲ್ಲಿ ರಾಜ್ಯ ಮಟ್ಟದ ನೇಮಕಾತಿ ಆಯೋಗ ನಡೆಸಿದ ತೃತೀಯ ದರ್ಜೆ ಮತ್ತು ನಾಲ್ಕನೇ ದರ್ಜೆಯ ನೌಕರರ ನೇಮಕಾತಿ ಪರೀಕ್ಷೆ ವೇಳೆ ಎಲ್ಲಾ ಜಿಲ್ಲೆಗಳಲ್ಲಿ 4 ಗಂಟೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.