ಒಡಿಶಾ | ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆ ಬಳಿಕ ಕೆಐಐಟಿ ವಿವಿಯಲ್ಲಿ ಭುಗಿಲೆದ್ದ ಪ್ರತಿಭಟನೆ
ಆತ್ಮಹತ್ಯೆ ಪ್ರಚೋದನೆ ಆರೋಪದಲ್ಲಿ ಓರ್ವನ ಬಂಧನ

Image Credit: x.com/AdityaRajKaul
ಭುವನೇಶ್ವರ: ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ)ಯಲ್ಲಿ ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ರವಿವಾರ ರಾತ್ರಿ ಪ್ರಕೃತಿ ಲಾಮ್ಸಾಲ್(20) ಎಂಬ ವಿದ್ಯಾರ್ಥಿನಿ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆಯನ್ನು ಖಂಡಿಸಿ ಸುಮಾರು 500 ನೇಪಾಳಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಹೋಗುವ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ನೇಪಾಳ ನಿರ್ಧರಿಸಿತ್ತು. ಆದರೆ ಆ ಬಳಿಕ ನಿರ್ಧಾರ ಬದಲಿಸಿದೆ. ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಒಲಿ ಮಧ್ಯಪ್ರವೇಶಿಸಿ ಅಧಿಕಾರಿಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ.
ಪ್ರತಿಭಟನೆಯ ಬಳಿಕ ಪ್ರಕೃತಿ ಲಾಮ್ಸಾಲ್ ಸಹಪಾಠಿ ಅದ್ವಿಕ್ ಶ್ರೀವಾಸ್ತವ ಎಂಬಾತನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಒಲಿ, ಒಡಿಶಾದ ಕೆಐಐಟಿ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ನೇಪಾಳಿ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ ಮತ್ತು ನೇಪಾಳಿ ವಿದ್ಯಾರ್ಥಿಗಳನ್ನು ಬಲವಂತವಾಗಿ ಹೊರಹಾಕಲಾಗಿದೆ ಎಂದು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಸರಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯದಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದ್ದಾರೆ.
ಭುವನೇಶ್ವರ ಡಿಸಿಪಿ ಪಿನಾಕ್ ಮಿಶ್ರಾ ಮಾತನಾಡಿ, ಲಮ್ಸಾಲ್ ಅವರ ಸೋದರಸಂಬಂಧಿ ಸಿದ್ಧಾಂತ್ ಸಿಗ್ಡೆಲ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದೆ. ಸಂತ್ರಸ್ತೆಯ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಕುರಿತು ತನಿಖೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.