ಗಾಝಾದಲ್ಲಿ ಇಸ್ರೇಲ್ ನಿಂದ ಭಯಾನಕ ನರಮೇಧ : ಪ್ರಿಯಾಂಕಾಗಾಂಧಿ ಖಂಡನೆ
ಪ್ರಿಯಾಂಕಾಗಾಂಧಿ | PC : PTI
ಹೊಸದಿಲ್ಲಿ : ಗಾಝಾದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಭೀಕರ ಯುದ್ಧವು 10ನೇ ತಿಂಗಳನ್ನು ಪ್ರವೇಶಿಸುತ್ತಿರುವಂತೆಯೇ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಸ್ರೇಲ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗಾಝಾ ಯುದ್ಧವನ್ನು ಸಮರ್ಥಿಸಿ ಅಮೆರಿಕ ಕಾಂಗ್ರೆಸ್ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾಡಿರುವ ಭಾಷಣಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೆಲ್ ಅವೀವ್ನ ನರಮೇಧದ ಕೃತ್ಯಗಳನ್ನು ಖಂಡಿಸಬೇಕು ಹಾಗೂ ಅದನ್ನು ನಿಲ್ಲಿಸುವಂತೆ ಒತ್ತಡಹೇರಬೇಕೆಂದು ಪ್ರಿಯಾಂಕಾ ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ.
‘‘ಇಸ್ರೇಲ್ ಜನತೆ ಸೇರಿದಂತೆ ದ್ವೇಷ ಹಾಗೂ ಹಿಂಸಾಚಾರದಲ್ಲಿ ನಂಬಿಕೆಯಿರಿಸದ ಉತ್ತಮ ಚಿಂತನೆಯ ಪ್ರತಿಯೊಬ್ಬ ವ್ಯಕ್ತಿಯ ಹಾಗೂ ಜಗತ್ತಿನ ಪ್ರತಿಯೊಂದು ಸರಕಾರದ ನೈತಿಕ ಹೊಣೆಗಾರಿಕೆಯಾಗಿದೆ. ಇಸ್ರೇಲಿನ ಕೃತ್ಯಗಳು ನಾಗರಿಕತೆ ಹಾಗೂ ನೈತಿಕತೆಯನ್ನು ಪ್ರತಿಪಾದಿಸುವ ಜಗತ್ತಿನಲ್ಲಿ ಅಸ್ವೀಕಾರಾರ್ಹವಾಗಿದೆ ’’ಎಂದವರು ಹೇಳಿದ್ದಾರೆ. ಅಮೆರಿಕ ಕಾಂಗ್ರೆಸನ್ನು ಉದ್ದೇಶಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಬುಧವಾರ ಮಾಡಿರುವ ಭಾಷಣವು ಅತ್ಯಂತ ಬರ್ಬರವಾದುದು ಎಂದು ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘‘ಗಾಝಾದಲ್ಲಿ ನಡೆಯುತ್ತಿರುವ ಭಯಾನಕ ನರಮೇಧದಿಂದಾಗಿ ದಿನದಿಂದ ದಿನಕ್ಕೆ ಪೌರರು, ತಾಯಂದಿರು, ತಂದೆಯವರು,ವೈದ್ಯರು, ನರ್ಸ್ಗಳು,ನೆರವು ಕಾರ್ಯಕರ್ತರು, ಪತ್ರಕರ್ತರು, ಶಿಕ್ಷಕರು, ಬರಹಗಾರರು, ಕವಿಗಳು , ಹಿರಿಯ ನಾಗರಿಕರು ಹಾಗೂ ಸಾವಿರಾರು ಅಮಾಯಕ ಮಕ್ಕಳನ್ನು ಹತ್ಯೆಗೈಯಲಾಗುತ್ತಿದೆ. ಆದರೆ ಇವರ ಬಗ್ಗೆ ಇಸ್ರೇಲ್ ಪ್ರಧಾನಿಯು ತನ್ನ ಭಾಷಣದಲ್ಲಿ ಚಕಾರವೆತ್ತಿಲ್ಲ ಎಂದರು.
ಅಮೆರಿಕ ಕಾಂಗ್ರೆಸ್ನಲ್ಲಿ ಇಸ್ರೇಲ್ ಪ್ರಧಾನಿಯ ಭಾಷಣಕ್ಕೆ ಸಭಿಕರು ಎದ್ದು ನಿಂತು ಕರತಾಡನ ಮಾಡಿದ ದೃಶ್ಯವನ್ನು ತೋರಿಸಲಾಗುತ್ತಿದೆ. ಈ ಯುದ್ಧವನ್ನು ಬರ್ಬರತೆ ಹಾಗೂ ನಾಗರಿಕತೆ ನಡುವಿನ ಸಂಘರ್ಷವೆಂದು ನೆತನ್ಯಾಹು ಬಣ್ಣಿಸಿದ್ದಾರೆ. ಅವರು ಹೇಳಿದ್ದುದು ಸರಿಯಾಗಿಯೇ ಇದೆ. ಅವರು ಹಾಗೂ ಅವರ ಸರಕಾರವೇ ಅತ್ಯಂತ ಬರ್ಬರವಾಗಿದೆಯ ಅವರ ಬರ್ಬರತೆಗೆ ಪಾಶ್ಚಾತ್ಯ ಜಗತ್ತು ಅಚಲ ಬೆಂಬಲವನ್ನು ನೀಡುತ್ತಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಪ್ರಿಯಾಂಕಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.