ಭಯೋತ್ಪಾದಕರಿಗೆ ಯಾವುದೇ ನಿಯಮಗಳಿಲ್ಲ,ಹೀಗಾಗಿ ಅವರನ್ನು ಮಟ್ಟ ಹಾಕಲು ದೇಶಕ್ಕೂ ನಿಯಮಗಳು ಬೇಕಿಲ್ಲ: ಎಸ್.ಜೈಶಂಕರ್
ಎಸ್.ಜೈಶಂಕರ | Pc : PTI
ಪುಣೆ: ಗಡಿಯಾಚೆಯಿಂದ ನಡೆಯುವ ಯಾವುದೇ ಭಯೋತ್ಪಾದಕ ಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಭಾರತವು ಬದ್ಧವಾಗಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರು,ಭಯೋತ್ಪಾದಕರಿಗೆ ಯಾವುದೇ ನಿಯಮಗಳಿಲ್ಲ,ಹೀಗಾಗಿ ಅವರನ್ನು ಮಟ್ಟ ಹಾಕಲು ದೇಶಕ್ಕೂ ಯಾವುದೇ ನಿಯಮಗಳು ಬೇಕಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಶುಕ್ರವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಯುವಕರೊಂದಿಗೆ ಸಂವಾದದ ವೇಳೆ 2008ರ ಮುಂಬೈ ಭಯೋತ್ಪಾದಕ ದಾಳಿಗಳಿಗೆ ನೀರಸ ಪ್ರತ್ಯುತ್ತರಕ್ಕಾಗಿ ಆಗಿನ ಯುಪಿಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜೈಶಂಕರ್, ಸರಕಾರದ ಮಟ್ಟದಲ್ಲಿ ಬಹಳಷ್ಟು ಚರ್ಚೆಯ ಬಳಿಕ ಪಾಕಿಸ್ಥಾನದ ವಿರುದ್ಧ ದಾಳಿ ನಡೆಸುವುದು ದಾಳಿ ಮಾಡದಿರುವುದಕ್ಕಿಂತ ಹೆಚ್ಚು ದುಬಾರಿಯಾಗುತ್ತದೆ ಎಂದು ಭಾವಿಸಿದ್ದರಿಂದ ಆಗ ಯಾವುದೂ ಫಲಪ್ರದವಾಗಿರಲಿಲ್ಲ ಎಂದು ಹೇಳಿದರು. ಈಗ ಇದೇ ರೀತಿಯ ದಾಳಿ ನಡೆದರೆ ಮತ್ತು ಅದಕ್ಕೆ ಪ್ರತಿಕ್ರಿಯಿಸದಿದ್ದರೆ ಮುಂದೆ ಇಂತಹ ದಾಳಿಗಳನ್ನು ತಡೆಯುವುದು ಹೇಗೆ ಎಂದು ಜೈಶಂಕರ್ ಪ್ರಶ್ನಿಸಿದರು.
2014ರಿಂದ ದೇಶದ ವಿದೇಶಾಂಗ ನೀತಿಯು ಬದಲಾವಣೆಗೊಳಗಾಗಿದೆ ಮತ್ತು ಇದು ಭಯೋತ್ಪಾದನೆಯನ್ನು ಎದುರಿಸುವ ವಿಧಾನವಾಗಿದೆ ಎಂದೂ ಅವರು ಹೇಳಿದರು.
ಸಂಬಂಧಗಳನ್ನು ಉಳಿಸಿಕೊಳ್ಳುವುದು ಭಾರತಕ್ಕೆ ಕಷ್ಟವಾಗಿರುವ ದೇಶಗಳ ಕುರಿತು ಪ್ರಶ್ನೆಗೆ ಜೈಶಂಕರ, ‘ಕೆಲವು ದೇಶಗಳೊಂದಿಗೆ ತಾನು ಸಂಬಂಧಗಳನ್ನು ಕಾಯ್ದುಕೊಳ್ಳಬೇಕೇ ಎಂದು ಭಾರತವು ಪ್ರಶ್ನಿಸಬೇಕು. ಒಂದಂತೂ ನಮ್ಮ ನೆರೆಯಲ್ಲಿಯೇ ಇದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪಾಕಿಸ್ತಾನವು ಸಂಬಂಧವನ್ನು ಕಾಯ್ದುಕೊಳ್ಳುವುದು ಅತ್ಯಂತ ಕಠಿಣವಾಗಿರುವ ದೇಶವಾಗಿದೆ. ಏಕೆ ಎಂಬ ಬಗ್ಗೆ ಮಾತ್ರ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇದಕ್ಕೆ ಒಂದು ಕಾರಣ ನಾವೇ ಆಗಿದ್ದೇವೆ ’ಎಂದು ಉತ್ತರಿಸಿದರು.
ಪಾಕಿಸ್ತಾನವು ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದೆ ಮತ್ತು ಇದನ್ನು ಭಾರತವು ಯಾವುದೇ ಸಂದರ್ಭದಲ್ಲಿಯೂ ಸಹಿಸುವುದಿಲ್ಲ ಎಂದು ಆರಂಭದಲ್ಲೇ ಸ್ಪಷ್ಟಪಡಿಸಿದ್ದರೆ ದೇಶವಿಂದು ತುಂಬ ವಿಭಿನ್ನ ನೀತಿಯನ್ನು ಹೊಂದಿರುತ್ತಿತ್ತು ಎಂದು ಹೇಳಿದ ಜೈಶಂಕರ್, 2014ರಲ್ಲಿ ಮೋದಿ ಸರಕಾರವು ಆಡಳಿತಕ್ಕೆ ಬಂದಿತ್ತು. ಆದರೆ ಭಯೋತ್ಪಾದನೆಯ ಸಮಸ್ಯೆ 2014ರಲ್ಲಿ ಆರಂಭಗೊಂಡಿರಲಿಲ್ಲ. ಮುಂಬೈ ದಾಳಿಗಳೊಂದಿಗೂ ಅದು ಆರಂಭಗೊಂಡಿರಲಿಲ್ಲ,ಅದು 1947ರಲ್ಲಿಯೇ ಆರಂಭಗೊಂಡಿತ್ತು. 1947ರಲ್ಲಿ ಮೊದಲ ಆಕ್ರಮಣಕೋರರು ಕಾಶ್ಮೀರಕ್ಕೆ ಬಂದಿದ್ದರು,ಅವರು ಕಾಶ್ಮೀರದ ಮೇಲೆ ದಾಳಿ ನಡೆಸಿದ್ದರು. ಅದು ಭಯೋತ್ಪಾದನೆ ಕೃತ್ಯವಾಗಿತ್ತು. ಅವರು ಗ್ರಾಮಗಳು ಮತ್ತು ಪಟ್ಟಣಗಳನ್ನು ಸುಟ್ಟು ಹಾಕಿದರು,ಅವರು ಜನರನ್ನು ಕೊಂದರು. ಈ ಜನರು ಪಾಕಿಸ್ತಾನದ ವಾಯುವ್ಯ ಗಡಿನಾಡು ಪ್ರಾಂತ್ಯದ ಬುಡಕಟ್ಟು ಜನರಾಗಿದ್ದರು ಮತ್ತು ಪಾಕಿಸ್ತಾನದ ಸೇನೆಯು ಅವರ ಬೆಂಬಲಕ್ಕೆ ನಿಂತಿತ್ತು. ನಾವು ಸೇನೆಯನ್ನು ಕಳುಹಿಸಿದ್ದೆವು ಮತ್ತು ಕಾಶ್ಮೀರವು ಭಾರತದಲ್ಲಿ ವಿಲೀನಗೊಂಡಿತ್ತು. ಭಾರತೀಯ ಸೇನೆಯು ತನ್ನ ಕಾರ್ಯಾಚರಣೆ ನಡೆಸುತ್ತಿದ್ದಾಗ ನಾವು ಅದನ್ನು ಮಧ್ಯದಲ್ಲಿಯೇ ನಿಲ್ಲಿಸಿ ವಿಶ್ವಸಂಸ್ಥೆಗೆ ಹೋಗಿದ್ದೆವು. ಅದೊಂದು ಕಾನೂನುಬದ್ಧ ಪಡೆಯೋ ಎಂಬಂತೆ ದಾಳಿಕೋರರನ್ನು ಭಯೋತ್ಪಾದಕರ ಬದಲು ಬುಡಕಟ್ಟು ನುಸುಳುಕೋರರು ಎಂದು ನಾವು ಉಲ್ಲೇಖಿಸಿದ್ದೆವು ’ ಎಂದರು.
1965ರ ಭಾರತ-ಪಾಕ್ ಯುದ್ಧದಲ್ಲಿ ಪಾಕಿಸ್ತಾನವು ಮೊದಲು ವಿಧ್ವಂಸಕ ಕೃತ್ಯಗಳನ್ನು ನಡೆಸಲು ನುಸುಳುಕೋರರನ್ನು ಕಳುಹಿಸಿತ್ತು ಎಂದ ಅವರು,‘ನಾವು ಭಯೋತ್ಪಾದನೆಯ ಬಗ್ಗೆ ಅತ್ಯಂತ ಸ್ಪಷ್ಟ ನಿಲುವನ್ನು ಹೊಂದಿರಬೇಕು. ಯಾವುದೇ ಸಂದರ್ಭದಲ್ಲಿಯೂ ಭಯೋತ್ಪಾದನೆ ಸ್ವೀಕಾರಾರ್ಹವಲ್ಲ ’ಎಂದು ಹೇಳಿದರು.