ಭಾರತದಲ್ಲಿ ಉದ್ಯೋಗ ನೇಮಕಾತಿಗೆ ಚಾಲನೆ ನೀಡಿದ ಟೆಸ್ಲಾ
ದೇಶೀಯ EV ಮಾರುಕಟ್ಟೆಗೆ ಪ್ರವೇಶಿಸುವ ಮುನ್ಸೂಚನೆ ನೀಡಿದ ಎಲಾನ್ ಮಸ್ಕ್ ಕಂಪನಿ

ಸಾಂದರ್ಭಿಕ ಚಿತ್ರ (X/@Tesla)
ಹೊಸದಿಲ್ಲಿ: ಕಾರ್ಯಾಚರಣೆ ವಿಶ್ಲೇಷಕ ಹಾಗೂ ಗ್ರಾಹಕರ ನೆರವು ತಜ್ಞ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಮೆರಿಕದ ದೈತ್ಯ ವಿದ್ಯುತ್ ಚಾಲಿತ ವಾಹನ ತಯಾರಿಕಾ ಕಂಪನಿ ಟೆಸ್ಲಾ ಚಾಲನೆ ನೀಡಿದ್ದು, ಆ ಮೂಲಕ ಭಾರತದ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆಯನ್ನು ಪ್ರವೇಶಿಸುವ ಮುನ್ಸೂಚನೆ ನೀಡಿದೆ.
ಟೆಸ್ಲಾ ಕಂಪನಿಯ ವೈಬ್ಸೈಟ್ ಪ್ರಕಾರ, ಈ ಹುದ್ದೆಗಳ ನೇಮಕಾತಿಯು ಮುಂಬೈ ಉಪ ನಗರ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ.
ಈ ಹುದ್ದೆಗಳ ಪೈಕಿ ಸೇವಾ ಸಲಹೆಗಾರ, ಬಿಡಿಭಾಗಗಳ ಸಲಹೆಗಾರ, ಸೇವಾ ತಂತ್ರಜ್ಞ, ಸೇವಾ ವ್ಯವಸ್ಥಾಪಕ, ಮಾರಾಟ ಮತ್ತು ಗ್ರಾಹಕರ ನೆರವು, ಗೋದಾಮು ವ್ಯವಸ್ಥಾಪಕ, ವ್ಯಾವಹಾರಿಕ ಕಾರ್ಯಾಚರಣೆ ವಿಶ್ಲೇಷಕ, ಗ್ರಾಹಕರ ನೆರವು ಮೇಲ್ವಿಚಾರಕ, ಗ್ರಾಹಕರ ನೆರವು ತಜ್ಞ, ಪೂರೈಕೆ ಕಾರ್ಯಾಚರಣೆ ತಜ್ಞ, ಆದೇಶ ಕಾರ್ಯಾಚರಣೆ ತಜ್ಞ, ಆಂತರಿಕ ಮಾರಾಟ ಸಲಹೆಗಾರ ಹಾಗೂ ಗ್ರಾಹಕರ ಸಂಪರ್ಕ ವ್ಯವಸ್ಥಾಪಕ ಹುದ್ದೆಗಳು ಸೇರಿವೆ.
ಪ್ರಧಾನಿ ನರೇಂದ್ರ ಮೋದಿಯ ಇತ್ತೀಚಿನ ಅಮೆರಿಕ ಭೇಟಿಯ ಸಂದರ್ಭದಲ್ಲಿ ಟೆಸ್ಲಾ ಮಾಲಕ ಎಲಾನ್ ಮಸ್ಕ್ ರೊಂದಿಗೆ ಸಭೆ ನಡೆಸಿದ ಬೆನ್ನಿಗೇ ಭಾರತದಲ್ಲಿ ಉದ್ಯೋಗ ನೇಮಕಾತಿ ಮಾಡಿಕೊಳ್ಳಲು ಟೆಸ್ಲಾ ಮುಂದಾಗಿದೆ.
ಟೆಸ್ಲಾಗೆ ಅತಿ ಹೆಚ್ಚು ಬಾಧ್ಯತೆಗಳಿವೆ ಎಂಬ ಕಾರಣವನ್ನು ಮುಂದು ಮಾಡಿ, ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ತಾವು ಭಾರತಕ್ಕೆ ನೀಡಬೇಕಿದ್ದ ಪ್ರಸ್ತಾವಿತ ಭೇಟಿಯನ್ನು ಎಲಾನ್ ಮಸ್ಕ್ ಮುಂದೂಡಿದ್ದರು. ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುವ ಯೋಜನೆಗಳನ್ನು ಎಲಾನ್ ಮಸ್ಕ್ ಪ್ರಕಟಿಸಬಹುದು ಎಂಬ ನಿರೀಕ್ಷೆ ಈ ಪ್ರಸ್ತಾವಿತ ಭೇಟಿಯ ಸಂದರ್ಭದಲ್ಲಿ ಗರಿಗೆದರಿತ್ತು.