ಮಾವನ ʼತಮಾಷೆಯʼ ಏಟಿಗೆ ಬಲಿಯಾದ ಮೂರು ವರ್ಷದ ಬಾಲಕಿ!
PC : indiatoday.in
ಥಾಣೆ: ಸೋದರ ಮಾವ ʼತಮಾಷೆʼಗೆಂದು ಹೊಡೆದ ಏಟಿಗೆ ಮೂರು ವರ್ಷದ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ನಂತರ, ಸಾಕ್ಷಿ ನಾಶ ಮಾಡಲು ಬಾಲಕಿ ಮೃತದೇಹವನ್ನು ಸುಟ್ಟು ಹಾಕಲು ಯತ್ನಿಸಿದ 38 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಥಾಣೆಯ ಉಲ್ಲಾಸ್ ನಗರದಲ್ಲಿ ನಡೆದಿದ್ದು, ಸೋಮವಾರ ಬಾಲಕಿಯ ತಾಯಿಯು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಉಲ್ಲಾಸ್ ನಗರ ಹಿಲ್ ಲೈನ್ ಪೊಲೀಸ್ ಠಾಣೆ ಬಳಿಯ ಪೊದೆಗಳಲ್ಲಿ ಭಾಗಶಃ ಸುಟ್ಟಿರುವ ಮೃತದೇಹವೊಂದು ಗುರುವಾರ ದೊರೆತಿದೆ.
ಇದರ ಬೆನ್ನಿಗೇ ದೂರುದಾರಳ ಸಹೋದರನಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಮನೆಯಲ್ಲಿ ಆರೋಪಿಯು ತನ್ನ ಸೋದರ ಸೊಸೆಯೊಂದಿಗೆ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ತಮಾಷೆಗೆಂದು ಆತ ತನ್ನ ಸೋದರ ಸೊಸೆಯ ಕೆನ್ನೆಗೆ ಹೊಡೆದಿದ್ದಾನೆ. ಆದರೆ, ಆ ಹೊಡೆತದ ತೀವ್ರತೆಗೆ ಬಾಲಕಿಯ ತಲೆ ನೆಲಕ್ಕೆ ಬಡಿದಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.
ತಕ್ಷಣವೇ ಬಾಲಕಿಯ ಮೃತದೇಹವನ್ನು ಅಡಗಿಸಿಟ್ಟಿರುವ ಆರೋಪಿಯು, ತನ್ನ ಸಹೋದರಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆಯ ದೂರು ದಾಖಲಿಸಿದ್ದಾನೆ.
ಕುಟುಂಬದ ಸದಸ್ಯರು ಬಾಲಕಿಯ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲೂ ಹಂಚಿಕೊಂಡಿದ್ದು, ಆಕೆಯ ಕುರಿತು ಮಾಹಿತಿ ನೀಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಬುಧವಾರ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದ್ದುದರ ಲಾಭ ಪಡೆಯಲು ಮುಂದಾಗಿದ್ದ ಆರೋಪಿ, ಆತನ ಪತ್ನಿ ಹಾಗೂ ಆತನ ಆಟೋರಿಕ್ಷಾ ಸ್ನೇಹಿತ, ಮೃತದೇಹವನ್ನು ಪೊದೆಗಳೊಳಗೆ ಕೊಂಡೊಯ್ದು, ಅದನ್ನು ಸುಟ್ಟು ಹಾಕಲು ಯತ್ನಿಸಿದ್ದಾರೆ.
ಗುರುವಾರ ಪೊಲೀಸರು ಬಾಲಕಿಯ ಪತ್ತೆ ಕಾರ್ಯಾಚರಣೆಗೆ ಆರಂಭಿಸಿದ್ದು, ಆ ಮೂವರೂ ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.
ರಿಕ್ಷಾ ಚಾಲಕನು ಮೃತದೇಹವನ್ನು ಪತ್ತೆ ಹಚ್ಚಿದರೂ, ಸಂಶಯದ ಮೇಲೆ ಅವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ನಾವು ಬಾಲಕಿಯ ಮೃತದೇಹವನ್ನು ಸುಟ್ಟು ಹಾಕಲು ಯತ್ನಿಸಿದೆವು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ನನಗೆ ಬಾಲಕಿಯನ್ನು ಕೊಲ್ಲುವ ಉದ್ದೇಶವಿರಲಿಲ್ಲ ಎಂದು ಆರೋಪಿ ಹೇಳಿದ್ದಾನೆ.
ಗಾಬರಿಯಿಂದ ನಾನು ಆಕೆಯ ಮೃತದೇಹವನ್ನು ಬಚ್ಚಿಟ್ಟೆ ಹಾಗೂ ನಂತರ ಅದನ್ನು ವಿಸರ್ಜಿಸಲು ಪ್ರಯತ್ನಿಸಿದೆ ಎಂದು ಆರೋಪಿಯು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.