ನ್ಯಾಷನಲ್ ಕಾನ್ಫರೆನ್ಸ್ ಪ್ರಣಾಳಿಕೆಯ ಕುರಿತು ಮಾತನಾಡಿದ್ದಕ್ಕೆ ಗೃಹಸಚಿವ ಶಾಗೆ ಥ್ಯಾಂಕ್ಸ್ : ಉಮರ್ ಅಬ್ದುಲ್ಲಾ
Photo Credit: The Hindu
ಗಂದರಬಾಲ್(ಜ-ಕಾ): ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಗಮನಿಸಿದ್ದಕ್ಕಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ತಾನು ಕೃತಜ್ಞನಾಗಿದ್ದೇನೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರು ರವಿವಾರ ಇಲ್ಲಿ ಹೇಳಿದರು.
‘ನಮ್ಮ ಪ್ರಣಾಳಿಕೆಯನ್ನು ಓದಲು ಸಿದ್ಧರಿಲ್ಲದ ಜನರೂ ಈಗ ಅದನ್ನು ಓದಲೇಬೇಕಾದ ಸ್ಥಿತಿಯಲ್ಲಿದ್ದಾರೆ ’ಎಂದೂ ಅವರು ಹೇಳಿದರು.
ಇಲ್ಲಿ ಪಕ್ಷದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, ‘ನಮ್ಮ ಪ್ರಣಾಳಿಕೆಯ ಬಗ್ಗೆ ಮಾತನಾಡಿದ್ದಕ್ಕೆ ನಾನು ಗೃಹಸಚಿವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ದೇಶದ ದೂರದ ಪ್ರದೇಶದಲ್ಲಿ ಸ್ಪರ್ಧಿಸುತ್ತಿರುವ ಸಣ್ಣ ಪಕ್ಷಕ್ಕೆ ಅದರ ಪ್ರಣಾಳಿಕೆಯನ್ನು ದೇಶದ ಗೃಹಸಚಿವರು ನೋಡಿರುವುದು ದೊಡ್ಡ ವಿಷಯವಾಗಿದೆ’ ಎಂದರು.
ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಾಗಿ ಎನ್ಸಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದ ಶಾ, ಅದು ತನ್ನ ಅಧಿಕಾರ ಆಸೆಯಲ್ಲಿ ದೇಶದ ಏಕತೆ ಮತ್ತು ಭದ್ರತೆಯನ್ನು ಪದೇ ಪದೇ ಅಪಾಯಕ್ಕೊಡ್ಡುತ್ತಿದೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ಮತ್ತೆ ಅಬ್ದುಲ್ಲಾ ಕುಟುಂಬದ ಎನ್ಸಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ತನ್ನ ದುರುದ್ದೇಶವನ್ನು ಬಹಿರಂಗಗೊಳಿಸಿದೆ ಎಂದು ಶಾ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದರು. ಎನ್ಸಿ ಪ್ರಣಾಳಿಕೆಯಲ್ಲಿನ ಹಲವಾರು ಭರವಸೆಗಳನ್ನು ಪಟ್ಟಿ ಮಾಡಿದ್ದ ಅವರು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿಯವರಿಗೆ 10 ಪ್ರಶ್ನೆಗಳನ್ನು ಒಡ್ಡಿದ್ದರು.
ಆದರೆ, 'ಎನ್ಸಿ ಪ್ರಣಾಳಿಕೆಯನ್ನು ಗಮನಿಸಿದ್ದಕ್ಕಾಗಿ ಶಾ ಅವರಿಗೆ ಧನ್ಯವಾದಗಳು. ಈವರೆಗೆ ನಮ್ಮ ಪ್ರಣಾಳಿಕೆಯನ್ನು ಓದಲು ಸಿದ್ಧರಿಲ್ಲದ ಜನರೂ ಅದನ್ನು ಓದುವಂತೆ ಅವರು ಮಾಡಿದ್ದಾರೆ. ಗೃಹಸಚಿವರು ನಮ್ಮ ಪ್ರಣಾಳಿಕೆಯ ಕೇವಲ ಒಂದು ಪ್ಯಾರಾವನ್ನು ನೋಡಿದ್ದು ಮತ್ತು ನಮ್ಮ ಪ್ರಣಾಳಿಕೆಯಲ್ಲಿಲ್ಲದ ಹೆಸರು ಬದಲಾವಣೆಯಂತಹ ಕೆಲವು ವಿಷಯಗಳ ಬಗ್ಗೆಯೂ ಮಾತನಾಡಿದ್ದು ವಿಷಾದಕರವಾಗಿದೆ. ಗೃಹಸಚಿವರ ಟ್ವೀಟ್ ನ ಬಳಿಕ ಈ ವಿಷಯವನ್ನು ನಾನು ನೋಡಲೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಪ್ರಣಾಳಿಕೆಯನ್ನು ಮತ್ತೆ ಓದಿದ್ದೇನೆ. ಆದರೆ ಶಾ ಹೇಳಿರುವ ಯಾವುದೂ ಅದರಲ್ಲಿಲ್ಲ. ಆದರೂ ನಾನು ಅವರಿಗೆ ಕೃತಜ್ಞನಾಗಿದ್ದೇನೆ’ ಎಂದು ಅಬ್ದುಲ್ಲಾ ಹೇಳಿದರು.
‘ಶಂಕರಾಚಾರ್ಯ ಪರ್ವತ’ವು ‘ತಖ್ತ್-ಎ-ಸುಲೇಮಾನ್’ ಮತ್ತು ‘ಹರಿ ಪರ್ವತ’ವು ‘ಕೋಹ್-ಎ-ಮಾರನ್ ’ಎಂದು ಕರೆಯಲ್ಪಡಬೇಕು ಎಂದು ಕಾಂಗ್ರೆಸ್ ಬಯಸುತ್ತಿದೆಯೇ ಎಂದು ಶಾ ಪ್ರಶ್ನಿಸಿದ್ದರು.