ಕಿರಿಯರು, ಹೆಚ್ಚು ಶಿಕ್ಷಿತರು ಮತ್ತು ಉತ್ತಮ ಲಿಂಗಾನುಪಾತ ಹೊಂದಿದ್ದ 17ನೇ ಲೋಕಸಭೆ
ಲೋಕಸಭೆ | Photo: NDTV
ಹೊಸದಿಲ್ಲಿ : ಶನಿವಾರ ತನ್ನ ಪ್ರಸಕ್ತ ಅವಧಿಯ ಕೊನೆಯ ಅಧಿವೇಶವನ್ನು ಮುಗಿಸಿರುವ 17ನೇ ಲೋಕಸಭೆಯು ಹೆಚ್ಚು ಕಿರಿಯರು, ಸುಶಿಕ್ಷಿತರು ಮತ್ತು ಉತ್ತಮ ಲಿಂಗಾನುಪಾತವನ್ನು ಹೊಂದಿರುವ ಸದನವಾಗಿತ್ತು ಎಂದು ದತ್ತಾಂಶಗಳು ತೋರಿಸಿವೆ. ಆದಾಗ್ಯೂ ಇತರ ದೇಶಗಳಿಗೆ ಹೋಲಿಸಿದರೆ ಈ ವಿಷಯಗಳಲ್ಲಿ ಲೋಕಸಭೆ ಈಗಲೂ ಹಿಂದುಳಿದಿದೆ. ಅಲ್ಲದೆ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದ ಸದಸ್ಯರ ಸಂಖ್ಯೆಯು ಒಟ್ಟು ಸದಸ್ಯಬಲದ ಅರ್ಧಕ್ಕಿಂತಲೂ ಕಡಿಮೆ (260) ಇದ್ದು, ಪುನರಾಯ್ಕೆಗೊಂಡ ಸಂಸದರ ಸಂಖ್ಯೆ ಹಿಂದಿನ ಲೋಕಸಭೆಗಿಂತ ಹೆಚ್ಚಿತ್ತು.
17ನೇ ಲೋಕಸಭೆಯಲ್ಲಿ 70 ವರ್ಷಕ್ಕಿಂತ ಹೆಚ್ಚಿನ ಕೆಲವೇ ಸಂಸದರಿದ್ದರೆ, 40 ವರ್ಷಕ್ಕಿಂತ ಕಡಿಮೆ ಪ್ರಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಂಸದರ ಸರಾಸರಿ ವಯಸ್ಸು 54 ವರ್ಷಗಳಾಗಿದ್ದವು. ಮೊದಲ ಲೋಕಸಭೆಯಲ್ಲಿ ಶೇ.26ರಷ್ಟಿದ್ದ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಂಸದರ ಪ್ರಮಾಣವು ಕ್ರಮೇಣ ಇಳಿಕೆಯಾಗುತ್ತ 16ನೇ ಲೋಕಸಭೆಯಲ್ಲಿ ಶೇ.8ಕ್ಕೆ ಕುಸಿದಿತ್ತು. ಆದರೆ 17ನೇ ಲೋಕಸಭೆ ರಚನೆಗೊಂಡಾಗ ಈ ಪ್ರಮಾಣ ಶೇ.12ಕ್ಕೆ ಏರಿಕೆಯಾಗಿತ್ತು.
ಒಡಿಶಾದ ಕಿಯೊಂಝಾರ್ನ ಬಿಜೆಡಿ ಸಂಸದೆ ಚಂದ್ರಾಣಿ ಮುರ್ಮು ಸದನದ ಅತ್ಯಂತ ಕಿರಿಯ ಸದಸ್ಯೆಯಾಗಿದ್ದು, 2019ರಲ್ಲಿ ಆಯ್ಕಗೊಂಡಾಗ ಅವರ ವಯಸ್ಸು 25 ವರ್ಷ 11 ತಿಂಗಳುಗಳಾಗಿದ್ದವು. ಉತ್ತರ ಪ್ರದೇಶದ ಸಂಭಲ್ನ ಎಸ್ಪಿ ಸಂಸದ ಶಫೀಕುರ್ ರಹಮಾನ್ ಬರ್ಕ್ ಅವರು ಅತ್ಯಂತ ಹಿರಿಯ ಸಂಸದರಾಗಿದ್ದು,ಆಯ್ಕೆಯಾದಾಗ ಅವರಿಗೆ 89 ವರ್ಷಗಳಾಗಿದ್ದವು. 17ನೇ ಲೋಕಸಭೆಯು 400 ಪದವೀಧರ ಸಂಸದರನ್ನೂ ಹೊಂದಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 716 ಮಹಿಳೆಯರು ಸ್ಪರ್ಧಿಸಿದ್ದು, ಅವರಲ್ಲಿ 78 ಮಹಿಳೆಯರು ಆಯ್ಕೆಯಾಗಿದ್ದರು. ಈಗ ಈ ಸಂಖ್ಯೆ 77ಕ್ಕೆ ಇಳಿದಿದೆ. 2014ರಲ್ಲಿ 62 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದರು. ಮೊದಲ ಲೋಕಸಭೆಯಲ್ಲಿ ಶೇ.5ರಷ್ಟಿದ್ದ ಮಹಿಳಾ ಸದಸ್ಯರ ಸಂಖ್ಯೆ ಕ್ರಮೇಣ ಏರಿಕೆಯನ್ನು ಕಂಡಿದ್ದು 17ನೇ ಲೋಕಸಭೆಯಲ್ಲಿ ಶೇ.14ರಷ್ಟಿತ್ತು.