ತಂದೆ ಮುತ್ಯಾಲ ರೆಡ್ಡಿಯ ತ್ಯಾಗಕ್ಕೆ ದೊಡ್ಡ ಉಡುಗೊರೆಯನ್ನೇ ನೀಡಿದ ಆಂಧ್ರಪ್ರದೇಶದ ಆಲ್ ರೌಂಡರ್
ಸರ್ಫ್ರಾಝ್ ಖಾನ್ ತಂದೆಯ ನಂತರ ನಿತೀಶ್ ಕುಮಾರ್ ರೆಡ್ಡಿ ತಂದೆಯ ಸರದಿ
ನಿತೀಶ್ ಕುಮಾರ್ ರೆಡ್ಡಿ | PTI
ಮೆಲ್ಬರ್ನ್ : ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಬಾಕ್ಸಿಂಗ್ ಡೇ ಪಂದ್ಯದ ಮೂರನೆಯ ದಿನವಾದ ಇಂದು ಭಾರತದ ಉದಯೋನ್ಮುಖ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಆಸ್ಟ್ರೇಲಿಯ ಬೌಲರ್ ಸ್ಕಾಟ್ ಬೋಲಂಡ್ ರ ಬಾಲ್ ಅನ್ನು ಬೌಂಡರಿಗೆ ಅಟ್ಟಿ ಶತಕ ಪೂರೈಸುತ್ತಿದ್ದಂತೆಯೆ, ಕ್ರೀಡಾಂಗಣದಲ್ಲಿದ್ದ ಅವರ ತಂದೆ ಮುತ್ಯಾಲ ರೆಡ್ಡಿಯವರ ಕಣ್ಣುಗಳು ಹನಿಗೂಡಿದ್ದವು. ಆ ಕಣ್ಣ ಹನಿಗಳು ಅವರ ತ್ಯಾಗದ ಸಾರ್ಥಕತೆಯನ್ನು ಸೂಚಿಸುತ್ತಿದ್ದವು.
ಶನಿವಾರ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಎಂಟನೆಯವರಾಗಿ ಕ್ರೀಸಿಗೆ ಬಂದ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಕೇವಲ ಚೊಚ್ಚಲ ಶತಕ ಮಾತ್ರ ಪೂರೈಸಿ ಅಜೇಯರಾಗುಳಿಯಲಿಲ್ಲ; ಬದಲಿಗೆ ಫಾಲೋ ಆನ್ ಭೀತಿಯಲ್ಲಿದ್ದ ಭಾರತ ತಂಡವನ್ನು ಅದರಿಂದ ಪಾರು ಮಾಡಿದ್ದಲ್ಲದೆ, ಪಂದ್ಯವು ಕುತೂಹಲಕರ ಘಟ್ಟ ತಲುಪುವಂತೆಯೂ ನೋಡಿಕೊಂಡರು.
ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 358 ರನ್ ಗಳಿಸಿರುವ ಭಾರತ ತಂಡ, ಇನ್ನೂ 114 ರನ್ ಗಳ ಹಿನ್ನಡೆಯಲ್ಲಿದೆ. ಆದರೆ, ಶತಕ ವೀರ ನಿತೀಶ್ ಕುಮಾರ್ ರೆಡ್ಡಿ ಇನ್ನೂ ಕ್ರೀಸಿನಲ್ಲಿರುವುದರಿಂದ, ನಾಳೆ ಈ ಅಂತರ ಮತ್ತಷ್ಟು ಕುಗ್ಗುವ ಆಶಯದಲ್ಲಿ ಭಾರತ ತಂಡವಿದೆ.
ನಿತೀಶ್ ಕುಮಾರ್ ರೆಡ್ಡಿಯ ಈ ಸಾಧನೆ ಹಿಂದೆ ಭಾರತದ ಮತ್ತೊಬ್ಬ ಭರವಸೆಯ ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫ್ರಾಜ್ ಖಾನ್ ಅವರ ತಂದೆ ನೌಶಾದ್ ಖಾನ್ ರ ತ್ಯಾಗದ ಕತೆ ಇರುವಂತೆ ನಿತೀಶ್ ಕುಮಾರ್ ರೆಡ್ಡಿಯ ತಂದೆ ಮುತ್ಯಾಲ ರೆಡ್ಡಿಯವರ ತ್ಯಾಗದ ಕತೆ ಕೂಡಾ ಇರುವುದು ವಿಶೇಷ.
“ನನ್ನ ತಂದೆ ನನಗಾಗಿ ತಮ್ಮ ಉದ್ಯೋಗ ತೊರೆದರು. ನನ್ನ ಇಂದಿನ ಸಾಧನೆಯ ಹಿಂದೆ ಅವರ ಸಾಕಷ್ಟು ತ್ಯಾಗದ ಕತೆಯಿದೆ. ಒಂದು ದಿನ ನಾವು ಅನುಭವಿಸುತ್ತಿದ್ದ ಹಣಕಾಸು ತೊಂದರೆಯಿಂದ ಅವರು ಅಳುತ್ತಿರುವುದನ್ನು ನಾನು ಕಂಡೆ. ಅಲ್ಲಿಯವರೆಗೆ ನಾನು ನನ್ನ ಕ್ರಿಕೆಟ್ ಜೀವನದ ಬಗ್ಗೆ ಗಂಭೀರವಾಗಿರಲಿಲ್ಲ. ಆದರೆ, ಆ ಕ್ಷಣ ನಾನು ಇರಬೇಕಾದ ರೀತಿ ಅದಲ್ಲ ಅನ್ನಿಸಿತು. ಅಂದಿನಿಂದ ನಾನು ನನ್ನ ಕ್ರಿಕೆಟ್ ಜೀವನದ ಬಗ್ಗೆ ಗಂಭೀರನಾದೆ. ನಾನು ನನ್ನ ಮೊದಲ ಜೆರ್ಸಿಯನ್ನು ಅವರಿಗೆ ನೀಡಿ, ಅವರ ಮುಖದಲ್ಲಿನ ಆನಂದವನ್ನು ಕಂಡೆ” ಎಂದು ತಮ್ಮ ಸಾಧನೆಯ ಹಾದಿ ಕುರಿತು ಮೆಲುಕು ಹಾಕುತ್ತಾರೆ ನಿತೀಶ್ ಕುಮಾರ್ ರೆಡ್ಡಿ.
ಆಂಧ್ರಪ್ರದೇಶದ ವಿಶಾಖಪಟ್ಟಣಂನವರಾದ ನಿತೀಶ್ ಕುಮಾರ್ ರೆಡ್ಡಿ ಇಲ್ಲಿಯವರೆಗೆ ಎಲ್ಲ ವಯೋಮಾನದ ಗುಂಪಿನಲ್ಲಿ ಆಟವಾಡಿದ್ದಾರೆ. ಒಂದು ದಿನ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಆಯ್ಕೆದಾರರಾದ ಎಂ.ಎಸ್.ಕೆ.ಪ್ರಸಾದ್ ಕಣ್ಣಿಗೆ ಬಿದ್ದ ನಿತೀಶ್ ಕುಮಾರ್ ರೆಡ್ಡಿ, ನಂತರ, ಆಂಧ್ರ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಲು ಪ್ರಾರಂಭಿಸಿದರು.
2016-17ರಲ್ಲಿ ನಡೆದ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ನಾಗಾಲ್ಯಾಂಡ್ ವಿರುದ್ಧ ಭರ್ಜರಿ 441 ರನ್ ಗಳಿಸಿದ್ದ ನಿತೀಶ್ ಕುಮಾರ್ ರೆಡ್ಡಿ, ಅದರೊಂದಿಗೆ ಇಡೀ ಟೂರ್ನಮೆಂಟ್ ನಲ್ಲಿ ಒಟ್ಟು 26 ವಿಕೆಟ್ ಗಳನ್ನೂ ಕಿತ್ತಿದ್ದರು. ಹೀಗಾಗಿ ಅವರು ಬ್ಯಾಟಿಂಗ್ ನಲ್ಲಿ ಸಾಕಷ್ಟು ಸಾಮರ್ಥ್ಯ ಇರುವ ಆಲ್ ರೌಂಡರ್ ಅಗಿ ಕ್ರಿಕೆಟ್ ಜಗತ್ತಿಗೆ ಪರಿಚಿತರಾದರು.
ಆದರೆ, ಇದಕ್ಕೂ ಮುನ್ನ, ಜಿಲ್ಲಾ ಮಟ್ಟದ ಕ್ರಿಕೆಟ್ ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಅಸ್ಥಿರ ಪ್ರದರ್ಶನ ನೀಡಿದ್ದರು. ಹೀಗಾಗಿ ನಿಮ್ಮ ಪುತ್ರ ಉತ್ತಮ ಆಟಗಾರನಲ್ಲದೆ ಇರುವುದರಿಂದ, ಆತ ಕ್ರಿಕೆಟ್ ಬದಲು ಶಿಕ್ಷಣದತ್ತ ಗಮನ ನೀಡುವುದು ಒಳ್ಳೆಯದು ಎಂದು ಕೆಲವು ಹಿತೈಷಿಗಳು ಮುತ್ಯಾಲ ರೆಡ್ಡಿಗೆ ಕಿವಿಮಾತು ಹೇಳಿದ್ದರು.
ಈ ಮಾತುಗಳಿಂದ ಧೃತಿಗೆಡದ ಮುತ್ಯಾಲ ರೆಡ್ಡಿ, ತಮ್ಮ ಪುತ್ರನ ಪ್ರದರ್ಶನವನ್ನು ಸುಧಾರಿಸಲು ವಿಶಾಖಪಟ್ಟಣಂನಲ್ಲಿನ ಮಹಾನಗರ ಪಾಲಿಕೆ ಕ್ರೀಡಾಂಗಣ ಹಾಗೂ ಪೊತ್ತಿನಮಲ್ಲಯ ಪಾಲೆಂನಲ್ಲಿನ ಸುಸಜ್ಜಿತ ಸೌಕರ್ಯ ಹೊಂದಿರುವ ಕ್ರೀಡಾಂಗಣಗಳಲ್ಲಿ ತಮ್ಮ ಪುತ್ರ ತರಬೇತಿ ಪಡೆಯಲು ನೆರವು ನೀಡಿದರು.
ಆಂಧ್ರಪ್ರದೇಶ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮೂರು ವರ್ಷಗಳ ನಂತರ, ನಿತೀಶ್ ಕುಮಾರ್ ರೆಡ್ಡಿಯ ಆಲ್ ರೌಂಡ್ ಕೌಶಲವು ಅವರಿಗೆ ಐಪಿಎಲ್ ಕ್ರೀಡಾಕೂಟದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಗುತ್ತಿಗೆಯನ್ನು ಗಿಟ್ಟಿಸಿಕೊಟ್ಟಿತು. ನಂತರ, ಈ ಅವಕಾಶವೇ ಅವರ ಪಾಲಿಗೆ ಭಾರತ ತಂಡದ ಸೇರ್ಪಡೆಗೆ ರಹದಾರಿಯಾಯಿತು. 2023ರ ಐಪಿಎಲ್ ಕ್ರೀಡಾಕೂಟದಲ್ಲಿ ತಮ್ಮ ಮೂಲಬೆಲೆಯಾದ 20 ಲಕ್ಷ ರೂಪಾಯಿಗೆ ಮಾರಾಟವಾಗಿದ್ದ ನಿತೀಶ್ ಕುಮಾರ್ ರೆಡ್ಡಿ, 2024ರ ಐಪಿಎಲ್ ಕ್ರೀಡಾಕೂಟದಲ್ಲಿ ನಿಗದಿತ ಅವಕಾಶಗಳು ದೊರೆತಾಗ ತಮ್ಮ ನೈಜ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಅವರು ಆಡಿದ ಮಹತ್ವದ ಇನಿಂಗ್ಸ್ ಗಳು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ಲೇ ಆಫ್ ಹಂತಕ್ಕೆ ಕರೆದೊಯ್ದಿತ್ತು.
ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ-20 ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ನಿತೀಶ್ ಕುಮಾರ್ ರೆಡ್ಡಿಯನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 6 ಕೋಟಿ ರೂ. ನೀಡಿ ತನ್ನಲ್ಲೇ ಉಳಿಸಿಕೊಂಡಿತ್ತು. ಈ ನಡುವೆ, ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಪ್ರಥಮ ಟೆಸ್ಟ್ ಪಂದ್ಯ ಆಡಲು ಬುಲಾವ್ ಬಂದಿತು. ಈ ಕರೆ ಕೆಲವರ ಹುಬ್ಬೇರುವಂತೆ ಮಾಡಿತೂ ಕೂಡಾ. ಆದರೆ, ಕೆಂಪು ಚೆಂಡಿನಲ್ಲಿನ ಆಡುವ ತಮ್ಮ ಸಾಮರ್ಥ್ಯದ ಕುರಿತು ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿರುವ ನಿತೀಶ್ ರೆಡ್ಡಿ, ತಮ್ಮ ಸ್ಥಿರ ಪ್ರದರ್ಶನದಿಂದ ಭರವಸೆಯ ಆಲ್ ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ತಾವಾಡಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿನ ಬ್ಯಾಟಿಂಗ್ ಸ್ಥಿರತೆಯ ಮೂಲಕ.
ತಾವಾಡಿರುವ ಆರು ಇನಿಂಗ್ಸ್ ಗಳಲ್ಲಿ 71ರ ಸರಾಸರಿಯಲ್ಲಿ 284 ರನ್ ಕಲೆ ಹಾಕಿರುವ ನಿತೀಶ್ ಕುಮಾರ್ ರೆಡ್ಡಿ, ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಭಾರತದ ಪರ ಗರಿಷ್ಠ ಸ್ಕೋರ್ ಗಳಿಸಿರುವ ಬ್ಯಾಟರ್ ಆಗಿದ್ದಾರೆ.
ನಿತೀಶ್ ಕುಮಾರ್ ರೆಡ್ಡಿ ಶನಿವಾರ ಗಳಿಸಿದ ಚೊಚ್ಚಲ ಶತಕವು ಅವರು ಭಾರತ ತಂಡದ ಹೊಸ ಶೋಧ ಎಂಬುದನ್ನು ಮಾತ್ರ ದೃಢಪಡಿಸಲಿಲ್ಲ; ಬದಲಿಗೆ ಭಾರತವನ್ನೂ ಸಂಕಷ್ಟದಿಂದ ಪಾರು ಮಾಡಿತು. ಆದರೆ, ಅವರ ಶತಕ ಕೂಡಾ ನರ್ವಸ್ ನೈಂಟಿಗೆ ಹೊರತಾಗಿರಲಿಲ್ಲ. ನಿತೀಶ್ ಕುಮಾರ್ ರೆಡ್ಡಿ ಮತ್ತೊಬ್ಬ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರೊಂದಿಗೆ ಎಂಟನೆ ವಿಕೆಟ್ ಜೊತೆಯಾಟದಲ್ಲಿ ಮಹತ್ವದ 127 ರನ್ ಕಲೆ ಹಾಕುವ ಮೂಲಕ ಭಾರತ ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅರ್ಧಶತಕ ಪೂರೈಸಿದ ವಾಷಿಂಗ್ಟನ್ ಸುಂದರ್, ನಥಾನ್ ಲಯಾನ್ ಬೌಲಿಂಗ್ ನಲ್ಲಿ ಸ್ಟೀವ್ ಸ್ಮಿತ್ ಗೆ ಸ್ಲಿಪ್ ನಲ್ಲಿ ಕ್ಯಾಚಿತ್ತು ನಿರ್ಗಮಿಸಿದಾಗ, 97 ರನ್ ಗಳಿಸಿದ್ದ ನಿತೀಶ್ ಕುಮಾರ್ ರೆಡ್ಡಿ, ತಮ್ಮ ಚೊಚ್ಚಲ ಶತಕದಿಂದ 3 ರನ್ ದೂರವಿದ್ದರು. ನಂತರ, ತಮ್ಮ ಶತಕಕ್ಕೆ ಇನ್ನು ಒಂದು ರನ್ ಗಳು ಬಾಕಿ ಇದ್ದಾಗ, ಜಸ್ ಪ್ರೀತ್ ಬುಮ್ರಾ ಯಾವುದೇ ರನ್ ಗಳಿಸದೆ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಸ್ಲಿಪ್ ನಲ್ಲಿದ್ದ ಉಸ್ಮಾನ್ ಖವಾಜಾರ ಕೈಗೆ ಕ್ಯಾಚಿತ್ತು ಔಟಾದರು.
ಆದರೆ, ನಂತರ ಬಂದ ಮುಹಮ್ಮದ್ ಸಿರಾಜ್, ಪ್ಯಾಟ್ ಕಮಿನ್ಸ್ ರ ಕೊನೆಯ ಮೂರು ಬಾಲ್ ಗಳನ್ನು ಸುರಕ್ಷಿತವಾಗಿ ಆಡಿ, ನಿತೀಶ್ ಕುಮಾರ್ ರೆಡ್ಡಿಗೆ ಸ್ಟ್ರೈಕ್ ಬಿಟ್ಟುಕೊಟ್ಟರು. ಆ ಅವಕಾಶವನ್ನು ಕೈಚೆಲ್ಲದ ನಿತೀಶ್ ಕುಮಾರ್ ರೆಡ್ಡಿ ಸ್ಯಾಮ್ ಬೋಲಂಡ್ ರ ಬಾಲನ್ನು ಬೌಂಡರಿಗೆ ಅಟ್ಟಿ ಚೊಚ್ಚಲ ಶತಕವನ್ನು ಆಚರಿಸಿದರು.
ತಮ್ಮ ಶತಕ ಪೂರೈಸುತ್ತಿದ್ದಂತೆಯೆ ತಮ್ಮ ಹೆಲ್ಮೆಟ್ ಅನ್ನು ತಮ್ಮ ಬ್ಯಾಟ್ ಮೇಲಿಟ್ಟ ನಿತೀಶ್ ಕುಮಾರ್ ರೆಡ್ಡಿ, ತಮ್ಮ ಮೊಣಕಾಲಿನ ಮೇಲೆ ಕುಳಿತು, ಆಕಾಶಕ್ಕೆ ಮುಖ ದಿಟ್ಟಿಸಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಕ್ರೀಡಾಂಗಣದಲ್ಲಿಯೇ ಇದ್ದ ನಿತೀಶ್ ಕುಮಾರ್ ರೆಡ್ಡಿಯ ತಂದೆ ಮುತ್ಯಾಲ ರೆಡ್ಡಿ ಭಾವುಕರಾಗಿಯೇ ತಮ್ಮ ಪುತ್ರನಿಗೆ ಅಭಿನಂದನೆ ಸಲ್ಲಿಸಿದರು.
“ನಾವು ತುಂಬಾ ತುಂಬಾ ಹೆಮ್ಮೆ ಮತ್ತು ಸಂತಸಕ್ಕೊಳಗಾಗಿದ್ದೇವೆ. ನಾವು ಈ ಪಂದ್ಯಕ್ಕೆ ಮಾತ್ರ ಇಲ್ಲಿಗೆ ಬಂದಿದ್ದೆವು ಹಾಗೂ ಈ ಪಂದ್ಯದಲ್ಲೇ ಆತನ ಶತಕವೂ ಪೂರೈಸಿತು. ಖಂಡಿತ ನಾವೆಲ್ಲರೂ ಉದ್ವೇಗಕ್ಕೊಳಗಾಗಿದ್ದೆವಾದರೂ, ಆತ ಶತಕ ಗಳಿಸುತ್ತಾನೆ ಎಂಬ ಖಾತ್ರಿಯಿತ್ತು” ಎಂದು ತಮ್ಮ ತಾಯಿ ಹಾಗೂ ತಂದೆಯೊಂದಿಗೆ ಎಂಸಿಜಿ ಕ್ರೀಡಾಂಗಣಕ್ಕೆ ಬಂದಿದ್ದ ನಿತೀಶ್ ಕುಮಾರ್ ರೆಡ್ಡಿ ಸಹೋದರಿ ಹರ್ಷ ವ್ಯಕ್ತಪಡಿಸಿದರು.
ತಮ್ಮ ಪುತ್ರನ ಸಾಧನೆಯಿಂದ ಗದ್ಗದಿತರಾಗಿದ್ದ ಮುತ್ಯಾಲ ರೆಡ್ಡಿ ಹೆಚ್ಚೇನೂ ಪ್ರತಿಕ್ರಿಯೆ ನೀಡದೆ, “ಚೊಚ್ಚಲ ಶತಕ ತುಂಬಾ ದೊಡ್ಡ ತಂಡವಾದ ಆಸ್ಟ್ರೇಲಿಯ ವಿರುದ್ಧ ಬಂದಿದೆ. ಹೀಗಾಗಿ ಇದು ನಮಗೆ ವಿಶೇಷ ದಿನ” ಎಂದು ಚುಟುಕಾಗಿ ಉತ್ತರಿಸಿದರು.
ಸೌಜನ್ಯ: TOI