ಭಾರತೀಯ ಕ್ರಿಕೆಟ್ ರಂಗದಲ್ಲಿ ಮತ್ತೊಬ್ಬ ಸಚಿನ್ ಆಗಮನ
19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ನಲ್ಲಿ ಫೈನಲ್ ಗೇರಿದ ಭಾರತ
Photo: ICC Media Zone
ಬೆನೊನಿ (ದಕ್ಷಿಣ ಆಫ್ರಿಕಾ): ಭಾರತೀಯ ಕ್ರಿಕೆಟ್ ರಂಗಕ್ಕೆ ಮತ್ತೊಬ್ಬ ಸಚಿನ್ ಆಗಮನವಾಗಿದೆ! ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನೇ ಹೋಲುವ ಸಚಿನ್ ದಾಸ್ ತಮ್ಮ ಸಿಕ್ಸರ್ ಸಿಡಿಸುವ ಸಾಮರ್ಥ್ಯದಿಂದ ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಫೈನಲ್ ಗೆ ಮುನ್ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ದಾಸ್ ಸಿಡಿಸಿದ 96 ರನ್ ಗಳ ನೆರವಿನಿಂದ ಭಾರತ ತಂಡವು ಫೈನಲ್ ಗೆ ಲಗ್ಗೆ ಇಟ್ಟಿದೆ ಎಂದು insidesport.in ವರದಿ ಮಾಡಿದೆ.
ಎರಡು ವರ್ಷಗಳ ಹಿಂದೆ ಪುಣೆಯಲ್ಲಿ ನಡೆದಿದ್ದ ಸೌಹಾರ್ದಯುತ 19 ವರ್ಷದೊಳಗಿನವರ ಕ್ರೀಡಾಕೂಟದ ಮೂಲಕ ಸಚಿನ್ ದಾಸ್ ಅವರ ಅದ್ಭುತ ಕ್ರಿಕೆಟ್ ಪಯಣವು ಪ್ರಾರಂಭಗೊಂಡಿತು. ದೊಡ್ಡ ಸಿಕ್ಸರ್ ಗಳನ್ನು ಸಿಡಿಸುವ ಸಚಿನ್ ದಾಸ್ ಸಾಮರ್ಥ್ಯವು ಎದುರಾಳಿಗಳನ್ನು ಅಧೀರಗೊಳಿಸುವಷ್ಟು ಪ್ರಭಾವಶಾಲಿಯಾಗಿದ್ದವು. ಆರಂಭದಲ್ಲಿ ಅವರ ಸಾಮರ್ಥ್ಯದ ಬಗ್ಗೆ ಅಡ್ಡ ಮಾತುಗಳು ಕೇಳಿ ಬಂದವಾದರೂ, ಆ ಎಲ್ಲದಕ್ಕೂ ತಮ್ಮ ಪ್ರತಿಭೆಯ ಮೂಲಕವೇ ಉತ್ತರ ನೀಡಿದ್ದ ಸಚಿನ್ ದಾಸ್, ದೊಡ್ಡ ಮಟ್ಟದ ಪ್ರದರ್ಶನಕ್ಕೆ ಮುನ್ನುಡಿ ಬರೆದಿದ್ದರು.
19 ವರ್ಷ ತುಂಬಲು ಇನ್ನು ಒಂದು ದಿನ ಮಾತ್ರ ಬಾಕಿ ಇರುವಾಗ ಸಚಿನ್ ದಾಸ್ ನೇಪಾಳ ತಂಡದ ವಿರುದ್ಧ ಅತ್ಯಂತ ಪ್ರಮುಖ ಪಾತ್ರವನ್ನೇ ನಿರ್ವಹಿಸಿದರು. ಭಾರತ ತಂಡವು ಆರಂಭದಲ್ಲೇ ವೇಗವಾಗಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ, ನಾಯಕ ಉದಯ್ ಸಹರಣ್ (110) ಜೊತೆಗೂಡಿದ ಸಚಿನ್ ದಾಸ್, ಅವರೊಂದಿಗೆ ಮುರಿಯದ ನಾಲ್ಕನೆ ವಿಕೆಟ್ ಗೆ ಅಜೇಯ 215 ರನ್ ಗಳನ್ನು ಪೇರಿಸಿ, ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ತಂಡವು 5 ವಿಕೆಟ್ ನಷ್ಟಕ್ಕೆ 297 ರನ್ ಗಳ ಉತ್ತಮ ಮೊತ್ತವನ್ನು ಪೇರಿಸಿದ್ದಲ್ಲದೆ, ಎದುರಾಳಿ ನೇಪಾಳ ತಂಡವನ್ನು ಕೇವಲ 165 ರನ್ ಗೆ ನಿಯಂತ್ರಿಸುವಲ್ಲೂ ಯಶಸ್ವಿಯಾಯಿತು.
ಫಿನಿಶರ್ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಸಚಿನ್ ದಾಸ್, ಈ ಕ್ರೀಡಾಕೂಟದ ಹಿಂದಿನ ನಾಲ್ಕು ಪಂದ್ಯಗಳಲ್ಲಿ 20ಕ್ಕಿಂತ ಹೆಚ್ಚು ಬಾಲ್ ಗಳನ್ನು ಎದುರಿಸದೆ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದ್ದರು. ಕಳೆದ ನಾಲ್ಕು ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ 26 (20), ಎರಡನೆ ಪಂದ್ಯದಲ್ಲಿ ಅಜೇಯ 21 (9), ಮೂರನೆಯ ಪಂದ್ಯದಲ್ಲಿ 20 (16) ಹಾಗೂ ನಾಲ್ಕನೆ ಪಂದ್ಯದಲ್ಲಿ 15 (11) ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದರು. ಆದರೆ, ನೇಪಾಳ ತಂಡದೆದುರು ಸಮಯಕ್ಕೆ ಸರಿಯಾಗಿ ತಮ್ಮ ಲಯ ಕಂಡುಕೊಂಡ ಸಚಿನ್ ದಾಸ್, ಆರಂಭಿಕ ಕುಸಿತದಿಂದ ಕಂಗೆಟ್ಟಿದ್ದ ಭಾರತ ತಂಡವನ್ನು ಸ್ಥಿರಗೊಳಿಸಿದ್ದು ಮಾತ್ರವಲ್ಲದೆ, ಭಾರತ ತಂಡವು ಭಾರಿ ಮೊತ್ತವನ್ನು ಗಳಿಸುವಲ್ಲೂ ಮಹತ್ವದ ಪಾತ್ರ ವಹಿಸಿದರು.
ಇತ್ತೀಚೆಗೆ ಬರದಿಂದ ತತ್ತರಿಸಿರುವ ಬೀಡ್ ಪ್ರಾಂತ್ಯದವರಾದ ಸಚಿನ್ ದಾಸ್ ರನ್ನು ರೂಪಿಸುವಲ್ಲಿ ಅವರ ತರಬೇತುದಾರ ಶೇಖ್ ಅಝರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಟರ್ಫ್ ವಿಕೆಟ್ ಕೊರತೆಯಿರುವ ಪ್ರಾಂತ್ಯದಲ್ಲಿ ಸಚಿನ್ ದಾಸ್ ಅವರ ತಂದೆ ಸಂಜಯ್ ಅವರ ನೆರವಿನೊಂದಿಗೆ ಎಲ್ಲ ಅಡೆತಡೆಗಳ ನಡುವೆಯೂ ಟರ್ಫ್ ವಿಕೆಟ್ ನಿರ್ಮಿಸಿದವರು ಶೇಖ್ ಅಝರ್. ಬೀಡ್ ನಲ್ಲಿನ ನೀರಿನ ಕೊರತೆಯು ಅವರಿಗೆ ಗಂಭೀರ ಸವಾಲನ್ನು ಒಡ್ಡಿತಾದರೂ, ಅವರ ಅರ್ಪಣಾ ಮನೋಭಾವವು ಅವರಿಗೆ ಯಶಸ್ಸನ್ನು ತಂದು ಕೊಟ್ಟಿತು ಎಂದು ಹೇಳಲಾಗಿದೆ.
19 ವರ್ಷದೊಳಗಿನವರ ವಿಶ್ವವ ಕಪ್ ಕ್ರಿಕೆಟ್ ನಲ್ಲಿ ಸಚಿನ್ ದಾಸ್ ರ ಯಶಸ್ಸಿನ ಪಯಣ ಮುಂದುವರಿದಿರುವುದರಿಂದ ಬೀಡ್ ನಲ್ಲಿ ಸಂಭ್ರಮ ಮನೆ ಮಾಡಿದೆ. ಸಚಿನ್ ದಾಸ್ ರ ಪಯಣದಲ್ಲಿ ಹೂಡಿಕೆ ಮಾಡಿದ್ದ ತರಬೇತುದಾರ ಶೇಖ್ ಅಝರ್ ಇದರಿಂದ ಭಾವುಕಗೊಂಡಿದ್ದು, ತಮ್ಮ ಪ್ರಯತ್ನ ಫಲಗೂಡಿದ್ದಕ್ಕೆ ಹೆಮ್ಮೆಯಿಂದ ಬೀಗುತ್ತಿದ್ದಾರೆ.