ಆಮಿರ್ ಖಾನ್ ಪುತ್ರನ ಚಿತ್ರ ʼಮಹಾರಾಜ್ʼಗೆ ನೀಡಿದ್ದ ತಡೆ ತೆರವು
ಮಹಾರಾಜ್ | PC : X
ಅಹ್ಮದಾಬಾದ್: ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಅವರ ಚೊಚ್ಚಲ ಚಿತ್ರ ಮಹಾರಾಜ್ ಬಿಡುಗಡೆಗೆ ನೀಡಿದ್ದ ತಡೆಯನ್ನು ಗುಜರಾತ್ ನ್ಯಾಯಾಲಯ ತೆರವುಗೊಳಿಸಿದೆ. 1862ರ ಮಹಾರಾಜ್ ಮಾನಹಾನಿ ಪ್ರಕರಣದ ಘಟನಾವಳಿಗಳನ್ನು ಆಧರಿಸಿದ ಈ ಚಿತ್ರ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಸಂಗೀತಾ ಕೆ.ವಿಶೆನ್ ಅವರು ಆರಂಭದಲ್ಲಿ ಜೂನ್ 13ಕ್ಕೆ ಚಿತ್ರ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿದ್ದರು. ಆದರೆ ಈ ಚಿತ್ರವನ್ನು ವೀಕ್ಷಿಸಿದ ಬಳಿಕ ನೆಟ್ಫ್ಲಿಕ್ಸ್ ನಲ್ಲಿ ಪ್ರಸಾರ ಮಾಡಲು ಅನುಮತಿ ನೀಡಿದ್ದರು. ಜುನೈದ್ ಹಾಗೂ ಜೈದೀಪ್ ಅಹ್ಲಾವತ್, ಶೆರ್ವಾನಿ ವಾಘ್ ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಮಹಾರಾಜ್ ಚಿತ್ರವು ಮಾನಹಾನಿ ಪ್ರಕರಣ ದಾಖಲಾಗಲು ಕಾರಣವಾದ ಅಂಶಗಳನ್ನು ಆಧರಿಸಿದ್ದು, ಪುಷ್ಟಿಮರ್ಗಿ ಸಮುದಾಯವನ್ನು ಅವಹೇಳನ ಮಾಡುವ ಅಥವಾ ಅವರ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನು ಒಳಗೊಂಡಿಲ್ಲ ಎಂದು ನ್ಯಾಯಾಲಯ ನಿರ್ಣಯಕ್ಕೆ ಬಂದಿದೆ. ಈ ಚಿತ್ರಕ್ಕೆ ಕೇಂದ್ರೀಯ ಫಿಲ್ಮ್ ಸರ್ಟಿಫಿಕೇಟ್ ಬೋರ್ಡ್ ಅನುಮೋದನೆ ನೀಡಿದೆ. ಜೂನ್ 13ರಂದು ನೀಡಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.