ನಾಳೆ ಮಣಿಪುರದಿಂದ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಆರಂಭ
ಜೈರಾಮ್ ರಮೇಶ್ | Photo: @INCIndia
ಗುವಾಹಟಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ರವಿವಾರ ಮಣಿಪುರದಿಂದ ಆರಂಭವಾಗಲಿರುವ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ರಾಜಕೀಯ ರ್ಯಾಲಿಯಾಗಿದ್ದು, ಚುನಾವಣೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಕಾಂಗ್ರೆಸ್ ಶನಿವಾರ ತಿಳಿಸಿದೆ.
‘ಭಾರತ್ ಜೋಡೊ ನ್ಯಾಯ ಯಾತ್ರೆ’ ‘ಭಾರತ್ ಜೋಡೊ ಯಾತ್ರೆ’ಯ ಎರಡನೇ ಹಂತ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಇಂಫಾಲದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಉದ್ಘಾಟನೆಯಲ್ಲಿ ಕಾಂಗ್ರೆಸ್ ಆಡಳಿತ ಇರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘‘ಇದೊಂದು ಸೈದ್ಧಾಂತಿಕ ಯಾತ್ರೆ. ಚುನಾವಣೆ ಯಾತ್ರೆ ಅಲ್ಲ. ಇದೊಂದು ರಾಜಕೀಯ ರ್ಯಾಲಿಯಾಗಿದ್ದು, ರಾಜಕೀಯ ಉದ್ದೇಶದಿಂದ ರಾಜಕೀಯ ಪಕ್ಷವೊಂದು ನಡೆಸುತ್ತಿದೆ. ನಮ್ಮ ರಾಜಕೀಯ ಉದ್ದೇಶ ಸಂವಿಧಾನ, ಸಂವಿಧಾನದ ಪ್ರಸ್ತಾವನೆ, ಅದರ ತತ್ತ್ವಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ರಕ್ಷಿಸುವುದು’’ ಎಂದು ಅವರು ಹೇಳಿದರು.
ಯಾತ್ರೆಯ ಆರಂಭಿಕ ಸ್ಥಳವನ್ನಾಗಿ ಮಣಿಪುರವನ್ನು ಆಯ್ಕೆ ಮಾಡಿರುವುದು ಉದ್ದೇಶಪೂರ್ವಕವಾಗಿ ಎಂದು ಅವರು ಹೇಳಿದರು. ಕಾಂಗ್ರೆಸ್ ಹಲವು ಆಯ್ಕೆಗಳನ್ನು ಪರಿಶೀಲಿಸಿತು. ಅಂತಿಮವಾಗಿ ಮಣಿಪುರದಿಂದ ಆರಂಭಿಸಲು ನಿರ್ಧರಿಸಿತು. ಇಲ್ಲಿ ಏನು ಸಂಭವಿಸಿದೆ ಎಂಬುದರ ಬಗ್ಗೆ ನಮ್ಮ ಕಳವಳವನ್ನು ಪ್ರತಿಬಿಂಬಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 8 ತಿಂಗಳಿಂದ ಮಣಿಪುರದ ಯಾವುದೇ ನಾಯಕರನ್ನು ಭೇಟಿಯಾಗದೇ ಇರುವುದರ ಬಗ್ಗೆ ಜನರ ಗಮನ ಸೆಳೆಯಲು ಮಣಿಪುರದಿಂದ ಈ ಯಾತ್ರೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಜನಾಂಗೀಯ ಹಿಂಸಾಚಾರದಿಂದಾಗಿ ಮಣಿಪುರದ ಜನರು ಸಂಕಟ ಅನುಭವಿಸಬೇಕಾಯಿತು. ಲಕ್ಷಾಂತರ ಜನರು ಸ್ಥಳಾಂತರಗೊಂಡರು. ನೂರಾರು ಜನರ ಹತ್ಯೆ ನಡೆಯಿತು. ರಾಜ್ಯದ ಸೌಹಾರ್ದ ನಾಶವಾಯಿತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.