ಹೃದಯ ಸ್ತಂಭನದಿಂದ ಸಾಯುವ ಮುನ್ನ 48 ಪ್ರಯಾಣಿಕರ ಜೀವವುಳಿಸಿದ ಬಸ್ ಚಾಲಕ
ಸಾಂದರ್ಭಿಕ ಚಿತ್ರ
ಭುವನೇಶ್ವರ: ಶುಕ್ರವಾರ ರಾತ್ರಿ ಕಂಧಮಾಲ್ನಿಂದ ಭುವನೇಶ್ವರಕ್ಕೆ ಚಲಿಸುತ್ತಿದ್ದ ಖಾಸಗಿ ಬಸ್ನ ಚಾಲಕ ತನ್ನ ಸಮಯ ಪ್ರಜ್ಞೆಯನ್ನು ಮೆರೆದು 48 ಪ್ರಯಾಣಿಕರ ಜೀವಗಳನ್ನುಳಿಸಿದ್ದಾರೆ. ಬಸ್ ಚಲಾಯಿಸುತ್ತಿದ್ದಾಗಲೇ ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಅವರು ಕೊನೆಯುಸಿರೆಳೆಯುವ ಮುನ್ನ ರಸ್ತೆ ಬದಿಯ ಗೋಡೆಯೊಂದಕ್ಕೆ ಬಸ್ನ್ನು ಢಿಕ್ಕಿ ಹೊಡೆಸಿ ಅದನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಂಧಮಾಲ್ ಜಿಲ್ಲೆಯ ಪಬುರಿಯಾ ಗ್ರಾಮದ ಸಮೀಪ ಈ ಘಟನೆ ಸಂಭವಿಸಿದೆ.
ಸನಾ ಪ್ರಧಾನ್ ಬಸ್ ಚಲಾಯಿಸುತ್ತಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಮತ್ತು ಸ್ಟಿಯರಿಂಗ್ ಮೇಲೆ ನಿಯಂತ್ರಣವನ್ನು ಕಳೆದುಕೊಂಡಿದ್ದರು. ಬಸ್ನ್ನು ಮುಂದೆ ಚಲಾಯಿಸಲು ಸಾಧ್ಯವಿಲ್ಲ ಎನ್ನುವುದು ಗೊತ್ತಾದಾಗ ಅವರು ರಸ್ತೆ ಬದಿಯ ಗೋಡೆಯೊಂದಕ್ಕೆ ಅದನ್ನು ಢಿಕ್ಕಿ ಹೊಡೆಸಿ ನಿಲ್ಲುವಂತೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.
ಘಟನೆಯ ಬಳಿಕ ಪ್ರಧಾನ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು,ಆದರೆ ಹೃದಯ ಸ್ತಂಭನದಿಂದ ಸಾವು ಸಂಭವಿಸಿದೆ ಎಂದು ಅಲ್ಲಿಯ ವೈದ್ಯರು ಘೋಷಿಸಿದರು ಎಂದರು.
ಕೆಲ ಸಮಯದ ಬಳಿಕ ಬೇರೊಬ್ಬ ಚಾಲಕನೊಂದಿಗೆ ಬಸ್ ತನ್ನ ಪ್ರಯಾಣವನ್ನು ಮುಂದುವರಿಸಿತ್ತು.