ಕೊಲಿಜಿಯಂ ಶಿಫಾರಸಿನಲ್ಲಿ ತನಗೆ ಬೇಕಾದ ನ್ಯಾಯಾಧೀಶರನ್ನು ಮಾತ್ರ ಕೇಂದ್ರ ಅಂಗೀಕರಿಸುವಂತಿಲ್ಲ ; ಸುಪ್ರೀಂ ಕೋರ್ಟ್ ಚಾಟಿ
Photo- PTI
ಹೊಸದಿಲ್ಲಿ: ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗಳಿಗೆ ಸಂಬಂಧಿಸಿ ಕೊಲಿಜಿಯಂ ಕಳುಹಿಸುವ ಹೆಸರುಗಳ ಪೈಕಿ ತನಗೆ ಬೇಕಾದವರನ್ನು ಮಾತ್ರ ಆಯ್ಕೆ ಮಾಡುವ ಪ್ರವೃತ್ತಿಯನ್ನು ಕೇಂದ್ರ ಸರಕಾರ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಕೊಲಿಜಿಯಂ ವ್ಯವಸ್ಥೆಯ ಪ್ರಕಾರ, ಮುಖ್ಯ ನ್ಯಾಯಾಧೀಶರು ಸೇರಿದಂತೆ ಸುಪ್ರೀಂ ಕೋರ್ಟ್ನ ಐವರು ಅತ್ಯಂತ ಹಿರಿಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗಳ ಬಗ್ಗೆ ನಿರ್ಧರಿಸುತ್ತಾರೆ. ಈ ಶಿಫಾರಸುಗಳನ್ನು ಕೇಂದ್ರ ಸರಕಾರ ಅಂಗೀಕರಿಸಬೇಕಾಗುತ್ತದೆ.
ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗಳ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಮತ್ತು ಕೇಂದ್ರ ಸರಕಾರ ಸಂಘರ್ಷಕ್ಕಿಳಿದಿವೆ. ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಲು ವಿಫಲವಾಗಿರುವುದಕ್ಕಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ಪದೇ ಪದೇ ಟೀಕಿಸುತ್ತಾ ಬಂದಿದೆ.
ಕೊಲಿಜಿಯಂನ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ವಿಳಂಬಿಸುತ್ತಿರುವುದಕ್ಕಾಗಿ ಕೇಂದ್ರ ಕಾನೂನು ಸಚಿವಾಲಯದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಅಸೋಸಿಯೇಶನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯ ಅವರನ್ನೊಳಗೊಂಡ ನ್ಯಾಯಪೀಠವು ಸರಕಾರಕ್ಕೆ ಈ ಸೂಚನೆ ನೀಡಿದೆ. ವಿಳಂಬದ ಬಗ್ಗೆ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯ ಜೊತೆಗೆ ನಡೆಸುತ್ತಿದೆ.
ನೇಮಕಾತಿಗಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳ ಪೈಕಿ 50 ಶೇಕಡದಷ್ಟನ್ನೂ ಕೇಂದ್ರ ಸರಕಾರ ಅನುಮೋದಿಸುತ್ತಿಲ್ಲ. ಇದಕ್ಕಾಗಿ ಅದು ಒಂದೋ ಗುಪ್ತಚರ ವರದಿಗಳನ್ನು ಅಥವಾ ಸರಕಾರದ ಪ್ರತಿಕೂಲ ವರದಿಗಳನ್ನು ಉಲ್ಲೇಖಿಸುತ್ತದೆ ಎಂದು ಮಂಗಳವಾರದ ವಿಚಾರಣೆಯ ವೇಳೆ ನ್ಯಾಯಪೀಠ ಹೇಳಿತು.
‘‘ತನಗೆ ಬೇಕಾದವರನ್ನು ಮಾತ್ರ ಆಯ್ಕೆ ಮಾಡುವ ಈ ನೀತಿಯು ಭಾರೀ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದಾಗಿ ಹಿರಿಯ ನ್ಯಾಯಾಧೀಶರು ಅವಕಾಶ ವಂಚಿತರಾಗಿದ್ದಾರೆ’’ ಎಂದೂ ನ್ಯಾ. ಕೌಲ್ ಅಟಾರ್ನಿ ಜನರಲ್ ಆರ್. ವೆಂಕಟರಮಣಿಗೆ ಹೇಳಿದರು.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ಗೆ ನೇಮಕಾತಿಗಾಗಿ ಕೊಲಿಜಿಯಂ ಶಿಫಾರಸು ಮಾಡಿರುವ ಐದು ಹೆಸರುಗಳ ಪೈಕಿ ಕೇವಲ ಮೂರಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ನ್ಯಾಯಾಲಯ ಹೇಳಿತು. ‘‘ಸರಕಾರ ಹೀಗೆ ಮಾಡಿದರೆ, ನ್ಯಾಯಾಧೀಶರುಗಳ ಹಿರಿತನದಲ್ಲಿ ಏರುಪೇರಾಗುತ್ತದೆ ಹಾಗೂ ನ್ಯಾಯಾಧೀಶರಾಗಿ ಸೇರ್ಪಡೆಗೊಳ್ಳುವಂತೆ ಯುವ ನ್ಯಾಯಾಧೀಶರ ಮನವೊಲಿಸಲು ಕಷ್ಟವಾಗುತ್ತದೆ’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಒಮ್ಮೆ ಕೊಲಿಜಿಯಂ ಬೇಡ ಎಂದರೆ ಅದು ಅಲ್ಲಿಗೇ ಮುಗಿಯಬೇಕು
ನ್ಯಾಯಾಧೀಶರ ಹುದ್ದೆಗೆ ಒಂದು ಹೆಸರನ್ನು ಸ್ವೀಕರಿಸಲು ಕೊಲಿಜಿಯಂ ನಿರಾಕರಿಸಿದಾಗ ಆ ವಿಷಯ ಅಲ್ಲಿಗೇ ಕೊನೆಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿತು.
‘‘ಕೇಂದ್ರ ಸರಕಾರ ಯಾವುದಾದರೂ ಹೆಸರನ್ನು ಪ್ರಸ್ತಾಪಿಸಿದರೆ ಹಾಗೂ ಕೊಲಿಜಿಯಂ ಅದನ್ನು ಅನುಮೋದಿಸದಿದ್ದರೆ, ಅಲ್ಲಿಗೆ ಆ ವಿಷಯ ಮುಕ್ತಾಯಗೊಳ್ಳಬೇಕು. ಇಂಥ ಸಂಗತಿಗಳು ಹಲವು ಬಾರಿ ನಡೆದಿವೆ. ಇತರ ಹೆಸರುಗಳನ್ನು ತಡೆಹಿಡಿಯಲು ಇದೊಂದು ಕಾರಣವಾಗಬಾರದು. ಹೀಗೆ ಮಾಡಿದರೆ ಅದು ಪಿಂಗ್ ಪಾಂಗ್ ಬಾಲ್ನಂತಾಗುತ್ತದೆ’’ ಎಂದು ನ್ಯಾಯಪೀಠ ಅಭಿಪ್ರಯಪಟ್ಟಿತು.
ವರ್ಗಾವಣೆಗಳಿಗಾಗಿ ಕೊಲಿಜಿಯಂ ಶಿಫಾರಸು ಮಾಡಿರುವ ನ್ಯಾಯಾಧೀಶರ ಹೆಸರುಗಳ ಅಂಗೀಕಾರದಲ್ಲೂ ಇದೇ ವಿಳಂಬ ಸಂಭವಿಸುತ್ತಿದೆ ಎಂದು ನ್ಯಾಯಾಲಯ ಹೇಳಿತು.