ಆರು ಎನ್ಜಿಒಗಳ ಪರವಾನಗಿ ರದ್ದುಗೊಳಿಸಿದ ಕೇಂದ್ರ
PC : ANI
ಹೊಸದಿಲ್ಲಿ: ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯಿದೆಯನ್ನು ಉಲ್ಲಂಘಿಸಿವೆ ಎಂಬ ಕಾರಣ ನೀಡಿ ಕೇಂದ್ರ ಗೃಹ ಸಚಿವಾಲಯವು ಆರು ಎನ್ಜಿಒಗಳ ಪರವಾನಗಿಗಳನ್ನು ರದ್ದುಗೊಳಿಸಿದೆ. ಪರವಾನಗಿ ರದ್ದುಗೊಂಡ ಕೆಲ ಸಂಸ್ಥೆಗಳ ವಿರುದ್ಧ ಧಾರ್ಮಿಕ ಮತಾಂತರ ಆರೋಪವನ್ನೂ ಹೊರಿಸಲಾಗಿದೆ.
ಡಯೊಸೀಸನ್ ಸೊಸೈಟಿ ಚರ್ಚ್ ಆಫ್ ನಾರ್ತ್, ಜೀಸಸ್ ಆ್ಯಂಡ್ ಮೇರಿ ಡೆಲ್ಲಿ ಎಜುಕೇಶನ್ ಸೊಸೈಟಿ, ಡೆಲ್ಲಿ ಡಯೋಸೀಸ್ ಓವರ್ಸೀಸ್ ಗ್ರಾಂಟ್ ಫಂಡ್, ಇನ್ಸ್ಟಿಟ್ಯೂಟ್ ಆಫ್ ಇಕನಾಮಿಕ್ ಗ್ರೋತ್, ಸ್ಯಾಮುವೆಲ್ ಫೌಂಡೇಷನ್ ಚ್ಯಾರಿಟೇಬಲ್ ಇಂಡಿಯಾ ಟ್ರಸ್ಟ್ ಮತ್ತು ಹೆಮೋಫೀಲಿಯಾ ಫೆಡರೇಷನ್ ಆಫ್ ಇಂಡಿಯಾ ಇವುಗಳ ಪರವಾನಗಿ ರದ್ದುಗೊಂಡಿದೆ.
ಈ ಸಂಸ್ಥೆಗಳು ಇನ್ನು ಮುಂದೆ ವಿದೇಶಿ ದೇಣಿಗೆಗಳನ್ನು ಪಡೆಯಲು ಸಾಧ್ಯವಿಲ್ಲ ಅಥವಾ ತಮ್ಮ ಬಳಿ ಈಗ ನಿರುವ ನಿಧಿಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
ಪರವಾನಗಿ ರದ್ದುಗೊಂಡಿರುವ ಇನ್ಸ್ಟಿಟ್ಯೂಟ್ ಆಫ್ ಇಕನಾಮಿಕ್ ಗ್ರೋತ್ ಆರ್ಥಿಕತೆ ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರದ ಪ್ರಮುಖ ಶೈಕ್ಷಣಿಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ ಮತ್ತು ಅಮಾರ್ತ್ಯ ಸೇನ್ ಹಾಗೂ ಎಲಿನೋರ್ ಒಸ್ಟ್ರೊಮ್ನಂತಹ ನೋಬೆಲ್ ಪ್ರಶಸ್ತಿ ವಿಜೇತರು ಇಲ್ಲಿ ಭಾಷಣ ನೀಡಿದ್ದಾರೆ.
ಹೆಮೋಫೀಲಿಯಾ ರೋಗಿಗಳ ಕಲ್ಯಾಣಕ್ಕಾಗಿ ಭಾರತದಲ್ಲಿ ಶ್ರಮಿಸುವ ಏಕೈಕ ಸಂಸ್ಥೆಯಾಗಿರುವ ಹೆಮೋಫೀಲಿಯಾ ಫೆಡರೇಷನ್ ಆಫ್ ಇಂಡಿಯಾದ ಪರವಾನಗಿಯೂ ರದ್ದುಗೊಂಡಿದೆ.
ಆರ್ಥಿಕ ವರ್ಷ 2016-17 ಹಾಗೂ 2021-22 ನಡುವೆ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಡಿಯ ಪರವಾನಗಿಗಳನ್ನು 6,600ಕ್ಕೂ ಅಧಿಕ ಎನ್ಜಿಒಗಳು ಕಳೆದುಕೊಂಡಿವೆ.