ಟಿಕೆಟ್ ರದ್ದತಿ, ವಿಳಂಬಗಳ ಕುರಿತು ವಿಸ್ತಾರ ಏರ್ಲೈನ್ಸ್ ನಿಂದ ವರದಿ ಕೇಳಿದ ಕೇಂದ್ರ ಸರಕಾರ
ವಿಸ್ತಾರ ಏರ್ಲೈನ್ಸ್ | Photo: NDTV
ಹೊಸ ದಿಲ್ಲಿ: ಟಾಟಾ ಸಮೂಹ ಹಾಗೂ ಸಿಂಗಪೂರ್ ಏರ್ ಲೈನ್ಸ್ ಸಹ ಮಾಲಕತ್ವದ ವಿಸ್ತಾರದ ಟಿಕೆಟ್ ರದ್ದತಿ ಹಾಗೂ ವಿಳಂಬಗಳ ಕುರಿತು ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯವು ವಿಸ್ತೃತ ವರದಿ ಕೇಳಿದೆ. ಕಳೆದ ಒಂದು ವಾರದಲ್ಲಿ ಈ ವಿಮಾನ ಯಾನ ಸಂಸ್ಥೆಯು 100ಕ್ಕೂ ಹೆಚ್ಚು ವಿಮಾನಗಳ ಟಿಕೆಟ್ ರದ್ದುಗೊಳಿಸಿದೆ ಇಲ್ಲವೆ ವಿಳಂಬವಾಗಿವೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಮಾನಗಳು ಪದೇ ಪದೇ ವಿಳಂಬಗೊಳ್ಳುತ್ತಿವೆ ಹಾಗೂ ಟಿಕೆಟ್ ಗಳು ರದ್ದುಗೊಳ್ಳುತ್ತಿವೆ ಎಂದು ವಿಸ್ತಾರ ವಿಮಾನ ಯಾನ ಸಂಸ್ಥೆಯು ದೃಢಪಡಿಸಿದ ಮರು ದಿನ ಈ ಬೆಳವಣಿಗೆ ನಡೆದಿದೆ. ವಿಮಾನ ಪ್ರಯಾಣಿಕರಿಂದ ತೀವ್ರ ಟೀಕೆಗೆ ಗುರಿಯಾದ ನಂತರ, ವಿಮಾನ ಯಾನ ವ್ಯವಸ್ಥೆಯನ್ನು ಸ್ಥಿರಗೊಳಿಸಲು ತಂಡಗಳು ಕೆಲಸ ಮಾಡುತ್ತಿವೆ ಎಂದು ವಿಸ್ತಾರ ವಿಮಾನ ಯಾನ ಸಂಸ್ಥೆ ಹೇಳಿದೆ.
ಸೋಮವಾರ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ವಿಸ್ತಾರ ಸಂಸ್ಥೆಯು, “ವಿವಿಧ ಕಾರ್ಯಾಚರಣೆ ಕಾರಣಗಳಿಂದಾಗಿ ಕಳೆದ ಕೆಲವು ದಿನಗಳಲ್ಲಿ ಹಲವಾರು ಸಂಖ್ಯೆಯ ವಿಮಾನ ರದ್ದತಿ ಹಾಗೂ ತಡೆಯಲಾಗದ ವಿಳಂಬಗಳು ಉಂಟಾಗಿವೆ ಎಂದು ದೃಢಪಡಿಸುತ್ತಿದ್ದೇವೆ. ಪರಿಸ್ಥಿತಿಯನ್ನು ಸ್ಥಿರಗೊಳಿಸಲು ನಮ್ಮ ತಂಡಗಳು ದಣಿವರಿಯದೆ ಕೆಲಸ ಮಾಡುತ್ತಿವೆ. ಈ ಅಡಚಣೆಗಳಿಂದ ತೊಂದರೆಗೀಡಾಗಿರುವ ನಮ್ಮ ಮೌಲ್ಯಯುತ ಗ್ರಾಹಕರಲ್ಲಿ ನಾವು ವಿಷಾದಿಸುತ್ತೇವೆ” ಎಂದು ಹೇಳಿದೆ.
ಈ ಕುರಿತು ವಿಮಾನ ಯಾನ ಸಂಸ್ಥೆಯ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ANI ಸುದ್ದಿ ಸಂಸ್ಥೆಯು, ದೀರ್ಘಕಾಲೀನ ವಿಮಾನ ಯಾನ ಅವಧಿಯ ಕಾರಣಕ್ಕೆ ಪೈಲಟ್ ಗಳು ಕಾರ್ಯಾಚರಣೆ ನಡೆಸಲು ನಿರಾಕರಿಸುತ್ತಿರುವುದರಿಂದ ಈ ಪರಿಸ್ಥಿತಿ ಉದ್ಭವವಾಗಿದೆ ಎಂದು ಹೇಳಿದೆ.