ಕಾಂಗ್ರೆಸ್ ಘೋಷಿಸಿದ್ದ ಯೋಜನೆಯಿಂದ ಪ್ರೇರಿತವಾದ ಕೇಂದ್ರದ ಇಂಟರ್ನ್ಶಿಪ್ ಯೋಜನೆ: ಜೈರಾಂ ರಮೇಶ್
ಜೈರಾಂ ರಮೇಶ್ | PC : PTI
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟಿನಲ್ಲಿ ಐದು ವರ್ಷಗಳ ಅವಧಿಯಲ್ಲಿ 500 ಅಗ್ರ ಕಂಪನಿಗಳಲ್ಲಿ 1 ಕೋಟಿ ಯುವಜನತೆಗೆ ಇಂಟರ್ನ್ಶಿಪ್ ಅವಕಾಶಗಳನ್ನೊದಗಿಸುವ ಯೋಜನೆಯು ಕಾಂಗ್ರೆಸ್ ಪಕ್ಷ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ʼಪೆಹ್ಲಿ ನೌಕ್ರಿ ಪಕ್ಕಿʼ ಯೋಜನೆಯಿಂದ ಪ್ರೇರಿತವಾಗಿದೆ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.
“ಆದರೆ ಅವರ ಟ್ರೇಡ್ಮಾರ್ಕ್ ಶೈಲಿಯಲ್ಲಿ ಎಲ್ಲರ ಗಮನ ಸೆಳೆಯುವ ಉದ್ದೇಶದಿಂದ ಯೋಜನೆಯನ್ನು ವಿನ್ಯಾಸಗೊಳಿಸಿ ಘೊಷಿಸಲಾಗಿದೆ. ಅಷ್ಟೇ ಅಲ್ಲದೆ ಎಲ್ಲಾ ಡಿಪ್ಲೋಮ ಹೊಂದಿರುವವರಿಗೆ ಮತ್ತು ಪದವೀಧರರಿಗೆ ಅನುಕೂಲ ಕಲ್ಪಿಸುವ ಬದಲು ಒಂದು ಕೋಟಿ ಯುವಜನರಿಗೆ ಎಂಬ ಲಕ್ಷ್ಯ ಇರಿಸಿಕೊಳ್ಳಲಾಗಿದೆ,” ಎಂದು ಜೈರಾಂ ರಮೇಶ್ ಹೇಳಿದ್ದಾರೆ.
“ಹತ್ತು ವರ್ಷಗಳ ಕಾಲ ನಿರುದ್ಯೋಗದ ಬಗ್ಗೆ ಚಕಾರವೆತ್ತದ ಸರ್ಕಾರ ಹಾಗೂ ಉದ್ಯೋಗ ಸೃಷ್ಟಿ ಬಗ್ಗೆ ಉಲ್ಲೇಖವೂ ಇರದ ಚುನಾವಣಾ ಪ್ರಣಾಳಿಕೆಗಳ ನಂತರ ಕೇಂದ್ರ ಸರ್ಕಾರ ಕೊನೆಗೂ ಬೃಹತ್ ನಿರುದ್ಯೋಗ ರಾಷ್ಟ್ರೀಯ ಬಿಕ್ಕಟ್ಟಾಗಿದೆ ಮತ್ತು ಅದಕ್ಕೆ ತುರ್ತು ಗಮನದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ,” ಎಂದು ಇನ್ನೊಂದು ಪೋಸ್ಟ್ನಲ್ಲಿ ಅವರು ಹೇಳಿದ್ದಾರೆ.