ಪ್ರಕ್ಷುಬ್ದ ಕಡಲಿನಲ್ಲಿ ಸಿಲುಕಿದ್ದ ನೌಕೆಯಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ ಕೋಸ್ಟ್ ಗಾರ್ಡ್
ಯಶಸ್ವಿ ಕಾರ್ಯಾಚರಣೆ | ಎಲ್ಲಾ 24 ಪ್ರಯಾಣಿಕರು, ಇಬ್ಬರು ಸಿಬ್ಬಂದಿ ಸುರಕ್ಷಿತ
ಸಾಂದರ್ಭಿಕ ಚಿತ್ರ | PC : NDTV
ಪಣಜಿ: ಗೋವಾದ ಮೊರ್ಮುಗಾಂವ್ ಬಂದರಿನ ಸಮೀಪ ಪ್ರತಿಕೂಲ ಹವಾಮಾನದಿಂದಾಗಿ ಕಡಲಿನ ಪ್ರಕ್ಷುಬ್ಧ ಅಲೆಗಳ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕ ದೋಣಿಯೊಂದರಲ್ಲಿದ್ದ ಎಲ್ಲಾ 24 ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಯನ್ನು ಸೋಮವಾರ ಕೋಸ್ಟ್ ಗಾರ್ಡ್ ರಕ್ಷಿಸಿದೆ.
‘ನೆರುಲ್ ಪ್ಯಾರಡೈಸ್’ ಎಂಬ ಹೆಸರಿನ ಈ ಪ್ರಯಾಣಿಕ ನೌಕೆಯು ಮೂರು ಮೀಟರ್ ಗಿಂತ ಎತ್ತರಕ್ಕೆ ಅಪ್ಪಳಿಸುತ್ತಿದ್ದ ಅಲೆಗಳ ನಡುವೆ ಅದು ಸಿಲುಕಿಕೊಂಡಿತ್ತು ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ವಕ್ತಾರರು ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಗಸ್ತು ಕಾರ್ಯಾಚರಣೆಯಿಂದ ವಾಪಸಾಗುತ್ತಿದ್ದ ಇಂಡಿಯನ್ ಕೋಸ್ಟ್ ಗಾರ್ಡ್ ನ ಸಿ-148 ಹಡಗಿನಲ್ಲಿದ್ದ ಸಿಬ್ಬಂದಿ, ಸಂಕಷ್ಟಕ್ಕೀಡಾಗಿದ್ದ ಪ್ರಯಾಣಿಕ ನೌಕೆಯನ್ನು ಗಮನಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾಗಿ ಎಲ್ಲಾ ಪ್ರಯಾಣಿಕರನ್ನು ತ್ವರಿತವಾಗಿ ರಕ್ಷಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮುದ್ರದ ಪ್ರಕ್ಷುಬ್ದ ಪರಿಸ್ಥಿತಿಯನ್ನು ಎದುರಿಸಿ ಇಂಡಿಯನ್ ಕೋಸ್ಟ್ ಗಾರ್ಡ್ ನ ಹಡಗು, ಅಪಾಯಕ್ಕೀಡಾಗಿದ್ದ ಪ್ರಯಾಣಿಕ ದೋಣಿಯನ್ನು ತಲುಪುವಲ್ಲಿ ಯಶಸ್ವಿಯಾಯಿತು. ಕೂಡಲೇ ತಂಡವೊಂದನ್ನು ದೋಣಿಯೊಳಗೆ ಕಳುಹಿಸಲಾಯಿತು ಹಾಗೂ ದೋಣಿಯಲ್ಲಿದ್ದ ಸಿಬ್ಬಂದಿಗೆ ನೆರವಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಿದ ತಟರಕ್ಷಣ ದಳದ ತಂಡವು ದೋಣಿಯನ್ನು ಸುರಕ್ಷಿತವಾಗಿ ಬಂದರಿಗೆ ತರುವಲ್ಲಿ ಯಶಸ್ವಿಯಾಯಿತು.
ಆನಂತರ ದೋಣಿಯಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ನಾವಿಕ ಸಿಬ್ಬಂದಿಗೆ ವೈದ್ಯಕೀಯ ನೆರವನ್ನು ಒದಗಿಸಲಾಯಿತು ಎಂದು ಅವರು ತಿಳಿಸಿತು.